ತಾಯ್ನಾಡು ತಲುಪಿದ ತೆಲಂಗಾಣದ ವ್ಯಕ್ತಿಯ ಮೃತದೇಹ
3 ತಿಂಗಳು ಶ್ರಮವಹಿಸಿದ ಇಂಡಿಯನ್ ಸೋಶಿಯಲ್ ಫೋರಂ

ದಮ್ಮಾಮ್, ಅ.26: ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಪೈಂಟಿಂಗ್ ಮಾಡುತ್ತಿದ್ದಾಗ ಕಟ್ಟಡದಿಂದ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ತೆಲಂಗಾಣ ನಿವಾಸಿ ಭೂಮಾನಂದನ್ ಎಂಬವರ ಮೃತದೇಹವನ್ನು ಇಂಡಿಯನ್ ಸೋಶಿಯಲ್ ಫೋರಮ್ನ ಸಹಕಾರದಲ್ಲಿ ಅವರ ತಾಯ್ನಾಡಿಗೆ ಕಳುಹಿಸಿಕೊಡಲಾಗಿದೆ. ತೀರಾ ಅಪರೂಪದ ಪ್ರಕರಣ ಇದಾಗಿದ್ದು, ಸಾಕಷ್ಟು ಕಾನೂನು ತೊಡಕುಗಳನ್ನು ನಿವಾರಿಸಿ ಭೂಮಾನಂದನ್ ಮೃತದೇಹವನ್ನು ಊರಿಗೆ ತಲುಪಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಸಾಕಷ್ಟು ಶ್ರಮವಹಿಸಿದೆ.
ತೆಲಂಗಾಣ ಮೂಲದ ಭೂಮಾನಂದನ್ ತನ್ನ ಪ್ರಾಯೋಜಕನ ಕೈಕೆಳಗೆ ದುಡಿಯದೆ ವೈಯಕ್ತಿಕವಾಗಿ ಹೊರಗಡೆ ದುಡಿಯುತ್ತಿದ್ದರು. ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿರುವುದರಿಂದ ಇದೊಂದು ಅಪರಾಧ ಪ್ರಕರಣವಾಗಿ ದಾಖಲಾಗಿ ಪ್ರಾಯೋಜಕ ಕೂಡ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಿತ್ತು. ಇಲ್ಲಿನ ಕಾರ್ಮಿಕ ಕಾನೂನು ಪ್ರಕಾರ ಸೂಕ್ತ ದಾಖಲೆಗಳಿಲ್ಲದೆ ಹೊರಗಡೆ ದುಡಿಯುವುದು ಅಪರಾಧವಾಗಿರುತ್ತದೆ. ದುರಂತದ ಸುದ್ದಿ ತಿಳಿದಾಕ್ಷಣ ಪ್ರಾಯೋಜಕ ಕಾನೂನು ಕ್ರಮದಿಂದ ಪಾರಾಗುವುದಕ್ಕಾಗಿ ಭೂಮಾನಂದನ್ ’’ನಾಪತ್ತೆ’’ ಎಂಬುದಾಗಿ ಕೇಸು ದಾಖಲಿಸಿದ್ದರು. ಇದರಿಂದಾಗಿ ಭೂಮಾನಂದನ್ ಅವರು ಬದುಕುಳಿದಿದ್ದರೂ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತಿರಲಿಲ್ಲ.
ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಭೂಮಾನಂದನ್‌ಗೆ ದಮ್ಮಾಮ್ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಭೂಮಾನಂದನ್ ಅವರ ಪುತ್ರ ಕೂಡಾ ದಮ್ಮಾಮ್‌ನಲ್ಲೇ ಕೆಲಸ ಮಾಡುತ್ತಿದ್ದು, ಮೃತದೇಹವನ್ನು ಅಲ್ಲೇ ದಫನ ಮಾಡಲು ಸಾಧ್ಯವಾಗದೆ, ಊರಿಗೆ ಕೊಂಡೊಯ್ಯಲೂ ಸಾಧ್ಯವಾಗದೆ ಕಂಗಾಲಾಗಿದ್ದು, ಸೋಶಿಯಲ್ ಫೋರಮ್ ಕರ್ನಾಟಕ ಸಮಿತಿಯ ನೆರವು ಕೇಳಿದ್ದರು.
ಅವರ ಮನವಿಗೆ ಸ್ಪಂದಿಸಿದ ಸೋಶಿಯಲ್ ಫೋರಂ, ಸೌದಿ ಪ್ರಾಯೋಜಕನನ್ನು ಸಂಪರ್ಕಿಸಿ ಆತನ ಮನವೊಲಿಸಿತು. ಇದರಿಂದಾಗಿ ತನಗೆ ಯಾವುದೇ ಕಾನೂನು ಸಮಸ್ಯೆ ಎದುರಾಗದು. ಯಾವುದೇ ದಂಡ ತೆರಬೇಕಾದಲ್ಲಿ ಅದಕ್ಕೆ ಇಂಡಿಯನ್ ಸೋಶಿಯಲ್ ಫೋರಂ ತಂಡವೇ ಹೊಣೆ ಎಂದು ಮುಚ್ಚಳಿಕೆ ಬರೆಸಿಕೊಂಡ ಬಳಿಕ ಪ್ರಾಯೋಜಕನು ಅಗತ್ಯ ದಾಖಲೆ ಪತ್ರಗಳಿಗೆ ಸಹಿಹಾಕಿದ್ದರು. ಬಳಿಕ ಭೂಮಾನಂದನ್ ಮೇಲೆ ದಾಖಲಿಸಿದ್ದ ಕೇಸನ್ನು ವಾಪಸು ಪಡೆದರು. ಇದರಿಂದ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನೆರವೇರಿಸಲು ಸಾಧ್ಯವಾಯಿತು. ಆಸ್ಪತ್ರೆಯ ದಾಖಲೆ ಪತ್ರ, ಪೊಲೀಸ್ ಇಲಾಖೆಯ ದಾಖಲೆ ಪತ್ರ, ಭಾರತೀಯ ರಾಯಭಾರಿ ಕಚೇರಿಯ ದಾಖಲೆ, ಆಸ್ಪತ್ರೆಯ ಬಿಲ್, ಮೃತದೇಹವನ್ನು ವಿಮಾನದಲ್ಲಿ ಊರಿಗೆ ಕೊಂಡೊಯ್ಯಲು ಬೇಕಾದ ದಾಖಲೆಗಳು ಇತ್ಯಾದಿಗಳನ್ನು ಸಂಗ್ರಹಿಸುವಲ್ಲಿ ಸೋಶಿಯಲ್ ಫೋರಂನ ಸದಸ್ಯರು ಸಾಕಷ್ಟು ಶ್ರಮವಹಿಸಿದರು. ಸೋಶಿಯಲ್ ಫೋರಂನ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಅ.21ರಂದು ಭೂಮಾನಂದನ್ ಅವರ ಮೃತದೇಹವು ತಾಯ್ನಾಡಿಗೆ ಕರೆತರಲಾಯಿತು.
ಫೋರಂನ ಕಮ್ಯುನಿಟಿ ವೆಲ್ಫೇರ್ ವಿಭಾಗದ ಮುಖ್ಯಸ್ಥ ನೌಶಾದ್ ಕಾಟಿಪಳ್ಳ ನೇತೃತ್ವದಲ್ಲಿ ಮುಹಮ್ಮದ್ ಶರಫುದ್ದೀನ್, ಇಬ್ರಾಹೀಂ ಕ್ರಷ್ಣಾಪುರ, ಝಕರಿಯಾ, ಅಬ್ದುಲ್ ಖಾದರ್ ಆಂಧ್ರ ಪ್ರದೇಶ ಮುಂತಾದವರು ಸಹಕರಿಸಿದ್ದರು. ಇಂಡಿಯನ್ ಸೋಶಿಯಲ್ ಫೋರಂನ ಪ್ರಯತ್ನಕ್ಕೆ ಸಹಕರಿಸಿ ಆಸ್ಪತ್ರೆಯ ಬಿಲ್‌ನ್ನು ಬಹಳಷ್ಟು ಕಡಿತಗೊಳಿಸಿದ ದಮ್ಮಾಮ್ ಆಸ್ಪತ್ರೆಯ ವೈದ್ಯ ಡಾ.ಅಭಿಜಿತ್, ವಿಮಾನದ ವೆಚ್ಚವನ್ನು ಭರಿಸಿದ ಭಾರತೀಯ ರಾಯಭಾರಿ ಕಚೇರಿ ಮತ್ತು ಅಗತ್ಯ ದಾಖಲೆಗಳಿಗೆ ಸಹಕರಿಸಿದ ಅಲ್ಲಿನ ಜಿಲ್ಲಾಡಳಿತಕ್ಕೂ ಸೋಶಿಯಲ್ ಫೋರಂ ಕೃತಜ್ಞತೆಗಳನ್ನು ಸಲ್ಲಿಸಿದೆ.







