ಕೊಡಗು: ಸಮಾನ ನಾಗರಿಕ ಸಂಹಿತೆಗೆ ಮುಸ್ಲಿಮರ ವಿರೋಧ

ಮಡಿಕೇರಿ. ಅ.26: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೊಡಗು ಮುಸ್ಲಿಮ್ ಸಮಾಜ ನಗರದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು ಕೇಂದ್ರಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೇಂದ್ರದ ಎನ್‌ಡಿಎ ಕೋಮುವಾದಿ ಕೂಟವಾಗಿದ್ದು, ಪ್ರಧಾನಿ ಮೋದಿ ಅವರು ತಲಾಖ್ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಕೇಂದ್ರ ಸರಕಾರ ಮುಂದಾಗಿದೆಯೆಂದು ಮುಸ್ಲಿಮ್ ಸಮಾಜದ ಕಾರ್ಯಾಧ್ಯಕ್ಷ ಪಿ.ಎಂ. ಕಾಸಿಮ್ ಟೀಕಿಸಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಕೇಂದ್ರ ಸರಕಾರದ ಮುಸ್ಲಿಮ್ ವಿರೋಧಿ ನೀತಿಯನ್ನು ಕೊಡಗಿನ ಮುಸ್ಲಿಮರು ಖಂಡಿಸುವುದಾಗಿ ತಿಳಿಸಿದರು. ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸಮಾನ ನಾಗರಿಕ ಸಂಹಿತೆಯ ವಿರುದ್ಧ ಕೈಗೊಂಡಿರುವ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಂಘ ಪರಿವಾರದ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿರುವ ಕೇಂದ್ರ ಸರಕಾರ, ಮುಸ್ಲಿಮರ ಹಕ್ಕಿನ ಮೇಲೆ ಸವಾರಿ ಮಾಡುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಅಮೀನ್ ಮೊಹಿಸಿನ್ ಮಾತನಾಡಿ, ಕೇಂದ್ರ ಸರಕಾರ ಸಂಘ ಪರಿವಾರ ಹೇಳಿದಂತೆ ನಡೆದುಕೊಳ್ಳುತ್ತಿದ್ದು, ಮುಸ್ಲಿಮರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆಯೆಂದು ಟೀಕಿಸಿದರು.
ಮುಸ್ಲಿಮ್ ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ತಮ್ಮ ಪತ್ನಿಯ ಕಣ್ಣೀರು ಒರೆಸಲಿ ಎಂದು ವ್ಯಂಗ್ಯವಾಡಿದರು. ಮೋದಿ ಅವರ ಪತ್ನಿ ಪತಿಗಾಗಿ ಹಂಬಲಿಸುತ್ತಿದ್ದಾರೆ ಎಂದ ಅಮೀನ್ ಮೊಹಿಸಿನ್, ಸಮಾನ ನಾಗರಿಕ ಸಂಹಿತೆ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದರು.
ಸಮಾಜದ ಅಧ್ಯಕ್ಷ ಕೆ.ಎಂ. ಇಬ್ರಾಹೀಂ, ಕಾರ್ಯದರ್ಶಿ ಎಚ್.ಎ. ಹಂಝ, ಉಪಾಧ್ಯಕ್ಷ ಕುಂಞಿ ಅಬ್ದುಲ್ಲ, ನಗರಸಭೆ ಸದಸ್ಯ ಮನ್ಸೂರ್, ಎಸ್‌ಡಿಪಿಐ ನಗರಾಧ್ಯಕ್ಷ ಕೆ.ಜಿ. ಪೀಟರ್, ಅಫ್ಸರ್, ಅಬ್ದುಲ್ ಅಡ್ಕಾರ್, ಎಂ.ಎ. ಉಸ್ಮಾನ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮನ್ಸೂರ್ ಅಲಿ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.







