ಮಾನಸಿಕ ಕಾಯಿಲೆಗೆ ಆತ್ಮಸ್ಥೈರ್ಯ ಪರಿಹಾರ: ನ್ಯಾ. ರೇಣಕೆ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಕಾರವಾರ, ಅ.26: ಮಾನಸಿಕ ಅಸ್ವಸ್ಥರನ್ನು ಕಡೆಗಣಿಸದೆ ಆತ್ಮಸ್ಥೈರ್ಯ ನೀಡಬೇಕು. ಒತ್ತಡದಿಂದ ಹೊರಬರಲು ಸಹಕರಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ಹಾಗೂ ಸಿವಿಲ್ ನ್ಯಾಯಾಧೀಶ ಡಿ.ಆರ್. ರೇಣಕೆ ಹೇಳಿದರು.
ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಭಾಭನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಕಾಯಿಲೆ ಇತರ ಕಾಯಿಲೆಗಳಂತಾದರೂ ಅದರ ಪರಿಣಾಮ ತೀವ್ರತ ರವಾಗಿರುತ್ತದೆ. ನಾವು ಅದನ್ನು ನಿರ್ಲಕ್ಷಿಸಿ ಚಿಂತಿಸಿದಷ್ಟು ಅದು ಉಲ್ಬಣಗೊಳ್ಳುತ್ತದೆ. ಕಾಯಿಲೆ ಆವರಿಸಿಕೊಳ್ಳಲು ಯಾವುದೇ ಘಟನೆಯೇ ಬೇಕೆಂದಿಲ್ಲ. ನಮ್ಮ ಜೀವನ ಶೈಲಿಯಲ್ಲಿ ನಡೆಯುವ ದಿನನಿತ್ಯದ ಆಗು ಹೋಗುಗಳೇ ನಮ್ಮನ್ನು ಈ ಕಾಯಿಲೆಯತ್ತ ನೂಕುತ್ತವೆ. ಯಾರೂ ಇದನ್ನು ನಿರ್ಲಕ್ಷಿಸದೆ ಪರಿಹಾರಕ್ಕೆ ಮಾರ್ಗ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಆಸ್ಪತ್ರೆಯ ಸರ್ಜನ್ ಶಿವಾನಂದ ಕುಡ್ತಲಕರ್ ಮಾತನಾಡಿ, ಸಾಮಾನ್ಯ ರೋಗಗಳನ್ನು ಔಷಧಗಳಿಂದ ಗುಣಪಡಿಸಲು ಸಾಧ್ಯ. ಆದರೆ ಮಾನಸಿಕ ವಾಗಿ ತೊಂದರೆಗೊಳಗಾದವರು ತಮ್ಮ ಮನಸಿನಲ್ಲಿರುವ ಒತ್ತಡಗಳನ್ನು ದೂರ ಮಾಡಿ ನೆಮ್ಮದಿಯಿಂದಿರಲು ಪ್ರಯತ್ನಿಸಬೇಕಾಗುತ್ತದೆ. ಮುಖ್ಯವಾಗಿ ದುಃಖದ ಸನ್ನಿವೇಶಗಳಲ್ಲಿ ಹಾಗೂ ಒತ್ತಡಗಳನ್ನು ಪದೇಪದೇ ನೆನಪಿಸಿಕೊಳ್ಳದೆ ಅವುಗಳನ್ನು ಆ ಕ್ಷಣದಲ್ಲಿ ಮರೆಯಬೇಕು. ಅಂದಾಗ ಮಾತ್ರ ನಾವು ಮಾನಸಿಕವಾಗಿ ಉತ್ತಮವಾಗಿರಲು ಸಾಧ್ಯವಿದೆ ಎಂದರು.
ಆರೋಗ್ಯಾಧಿಕಾರಿ ಡಾ. ಶಂಕರ್‌ರಾವ್ ಮಾತನಾಡಿ, ಜನರಲ್ಲಿನ ಕೆಲ ತಪ್ಪು ಕಲ್ಪನೆಗಳು ಮಾನಸಿಕವಾಗಿ ತೊಂದರೆಗೊಳಗಾದವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ 100 ಜನರಲ್ಲಿ ಒಬ್ಬರಿಗೆ ತೀವ್ರತರವಾದ ಮಾನಸಿಕ ಕಾಯಿಲೆ ಇದೆ. ಅದೇ ರೀತಿ 10 ಜನರಿಗೆ ಅಲ್ಪಪ್ರಮಾಣದಲ್ಲಿ ಮಾನಸಿಕ ಒತ್ತಡ ಇರುವುದಾಗಿ ಅಂದಾಜಿಸಿದೆ. ಅದರಂತೆ ದೇಶದಲ್ಲಿಯೂ ಇದರ ಪ್ರಮಾಣ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ನ್ಯಾಯಾಧೀಶ ದೇವೇಂದ್ರ ಪಂಡಿತ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಎನ್. ಅಶೋಕಕುಮಾರ್, ಆರ್.ಎಸ್. ಹೆಗಡೆ ಗಾಳೆ, ಎಂ.ಕೆ. ಸಲೀಂ ಸೇರಿದಂತೆ ಮತ್ತಿತರರಿದ್ದರು.







