ವೈಯಕ್ತಿಕ ಕಾನೂನುಗಳ ಬಗ್ಗೆ ಅಸಹಿಷ್ಣುತೆ ಸರಿಯಲ್ಲ್ಲ: ಇಬ್ರಾಹೀಂ ಸಖಾಫಿ
ಏಕರೂಪ ನಾಗರಿಕ ಸಂಹಿತೆ

ದಾವಣಗೆರೆ,ಅ.26: ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಮುಸ್ಲಿಮ್ ಸಂಘ-ಸಂಸ್ಥೆಗಳ ಒಕ್ಕೂಟವು ವಿರೋಧ ವ್ಯಕ್ತಪಡಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಲಮಾ ಒಕ್ಕೂಟದ ಕಾರ್ಯದರ್ಶಿ ವೌಲಾನ ಇಬ್ರಾಹೀಂ ಸಖಾಫಿ ಮಾತನಾಡಿ, ಕುರ್‌ಆನ್, ಶರೀಯತ್ ಕಾನೂನುಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಮುಸ್ಲಿಮರಿಗೆ ಕುರ್‌ಆನ್ ನಿಯಮಗಳು ಎಲ್ಲಕ್ಕಿಂತಲೂ ಮಿಗಿಲಾಗಿದ್ದು, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಬೆಳವಣಿಗೆಗಳು ಸಮಾಜದ ಶಾಂತಿಯನ್ನು ಹಾಳು ಮಾಡುತ್ತವೆ ಎಂದು ಎಚ್ಚರಿಸಿದರು.
ಭಾರತ ಸಂವಿಧಾನದ ಪರಿಚ್ಛೇದ 25, 26ರಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯವು ಸಂವಿಧಾನದ ನಿರ್ದೇಶಕ ತತ್ವಗಳಿಗಿಂತ ಮಿಗಿಲಾದದ್ದು. ಏಕರೂಪ ನಿಯಮ ಸಂಹಿತೆಯನ್ನು ಕೇವಲ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಪ್ರಸ್ತಾಪಿಸಿದ್ದು, ಇದನ್ನು ಜಾರಿಗೊಳಿಸುವುದರಿಂದ ಮೂಲಭೂತ ಹಕ್ಕುಗಳಿಗೆ ಕೊಡಲಿಪೆಟ್ಟು ಬೀಳಲಿದೆ. ಏಕರೂಪ ನಾಗರಿಕ ಸಂಹಿತೆಯ ತೂಗುಕತ್ತಿ ಮೂಲಕ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಆತಂಕಕ್ಕೀಡು ಮಾಡುವ ಪ್ರವೃತ್ತಿಯನ್ನು ಆಡಳಿತಗಾರರು ಕೊನೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸಾವಿರಾರು ಜಾತಿ, ಮತ, ಸಮುದಾಯಗಳ ಬಹುಮುಖ ಸಮಾಜದಲ್ಲಿ ಏಕರೂಪ ಕಾನೂನನ್ನು ಜಾರಿ ಮಾಡುವ ಕಲ್ಪನೆಯೇ ಅವಾಸ್ತವಿಕ. ವಿವಾಹ, ತಲಾಖ್ ಮುಂತಾದ ಖಾಸಗಿ ಆಚಾರಗಳಿಗೆ ಸಂಬಂಧಿಸಿದಂತೆ ಮಾತ್ರ ಸಂವಿಧಾನವು ಮುಸ್ಲಿಮರಿಗೆ ಶರೀಯತ್ ನಿಯಮ ಪಾಲಿಸಲು ಅವಕಾಶ ನೀಡಿದ್ದು, ಇನ್ನುಳಿದಂತೆ ಭಾರತೀಯ ದಂಡ ಸಂಹಿತೆಯನ್ನೇ ಪಾಲಿಸಲಾಗುತ್ತದೆ. ವಿವಿಧತೆಯಲ್ಲಿ ಏಕತೆಯ ವೌಲ್ಯಗಳನ್ನು ಎತ್ತಿ ಹಿಡಿದಿರುವ ವೈಯಕ್ತಿಕ ಕಾನೂನುಗಳ ಬಗ್ಗೆ ಅಸಹಿಷ್ಣುತೆ ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸೈಯದ್ ಸೈಫುಲ್ಲಾ ಮಾತನಾಡಿ, ತಲಾಖ್ ಮತ್ತು ಬಹುಪತ್ನಿತ್ವಕ್ಕೆ ಇಸ್ಲಾಮ್‌ನಲ್ಲಿ ಅವಕಾಶವಿದ್ದರೂ, ಅದಕ್ಕೂ ಕೆಲ ಷರತ್ತುಗಳಿವೆ. ಇದನ್ನರಿಯದೆ ಪೂರ್ವಗ್ರಹಪೀಡಿತರಾಗಿ ಸ್ತ್ರೀಶೋಷಣೆ ಎಂಬುದಾಗಿ ಬಿಂಬಿಸಿ, ಮುಸ್ಲಿಮ್ ವೈಯಕ್ತಿಕ ಕಾನೂನುಗಳನ್ನು ರದ್ದುಪಡಿಸುವುದು ಅಪಾಯಕಾರಿ ಬೆಳವಣಿಗೆ. ಅಭಿವೃದ್ಧಿಗೆ ಅಡ್ಡಿಯಾಗುವ ನೂರಾರು ಸಮಸ್ಯೆಗಳು ದೇಶದಲ್ಲಿದ್ದು, ಅವುಗಳ ಪರಿಹಾರಕ್ಕೆ ಸರಕಾರ ಮೊದಲು ಮುಂದಾಗಬೇಕು. ಸಂವಿಧಾನದ ನಿರ್ದೇಶಕ ತತ್ವಗಳ ಕುರಿತು ಸರಕಾರಕ್ಕೆ ಅಷ್ಟೊಂದು ಕಾಳಜಿ ಇದ್ದರೆ, ಬಹುದೊಡ್ಡ ಪಿಡುಗಾಗಿರುವ ಮದ್ಯಪಾನವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡ ಡಾ.ಸಿ.ಆರ್.ನಾಸೀರ್ ಅಹ್ಮದ್, ಸೈಯದ್ ಖಾಲಿದ್, ಮುನಾಫ್ ಹಾಜಿ, ಸೈಯದ್ ಮುಖ್ತಾರ್ ಅಹ್ಮದ್ ರಜ್ವಿ, ಅಬೂಬಕರ್ ಸಿದ್ದೀಕ್ ಅಮಾನಿ, ಚಮನ್ ಸಾಬ್, ಪಯಾಝ್ ಅಹ್ಮದ್, ಸುಬಾನ್ ಸಾಬ್ ಮತ್ತಿತರರು ಹಾಜರಿದ್ದರು.







