ಅಂಬೇಡ್ಕರ್ ರಸ್ತೆಯನ್ನು ಮಾರ್ಕೆಟ್ ರಸ್ತೆ ಎಂದು ಕರೆಯದಂತೆ ಒತ್ತಾಯಿಸಿ ಧರಣಿ
ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಚಿಕ್ಕಮಗಳೂರು, ಅ.26: ನಗರದ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿರುವ ರಸ್ತೆಯನ್ನು ಮಾರ್ಕೆಟ್ ರಸ್ತೆ ಎಂದು ಕರೆಯದಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬುಧವಾರ ನಗರಸಭೆ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ನಗರದ ಪ್ರಮುಖ ಮೂರು ರಸ್ತೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯೂ ಒಂದಾಗಿದೆ. 1993ರಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತ ಹಾಗೂ ದಲಿತ ಮುಖಂಡರು ಸೇರಿ ಮಾರ್ಕೆಟ್‌ಗೆ ತೆರಳುವ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಿದ್ದರು. ರಸ್ತೆಯ ಎರಡು ಬದಿಯಲ್ಲೂ ಕಡಪ ಕಲ್ಲಿನಿಂದ ಮುದ್ರಿಸಿದ ಫಲಕವನ್ನು ನಿಲ್ಲಿಲಾಗಿತ್ತು. ಆದರೆ ಜಾತಿವಾದಿಗಳಾಗಿರುವ ಸುತ್ತಮುತ್ತಲ ಅಂಗಡಿ ಮಾಲಕರು ಈ ರಸ್ತೆಯನ್ನು ಈಗಲೂ ಮಾರ್ಕೆಟ್ ರಸ್ತೆ ಎಂದು ಕರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಅಂಗಡಿಗಳ ಫಲಕದಲ್ಲಿ, ಪತ್ರಿಕೆಗಳಿಗೆ ಜಾಹೀರಾತು ನೀಡುವಾಗ ಮತ್ತಿತರ ಸಂದರ್ಭಗಳಲ್ಲಿ ಮಾರ್ಕೆಟ್ ರಸ್ತೆ ಎಂದೇ ಕರೆಯುತ್ತಾರೆ. ನಗರಸಭೆ ಕೂಡ ಟೆಂಡರ್ ಕರೆಯುವಾಗ, ಪರವಾನಿಗೆಯನ್ನು ನೀಡುವಾಗ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂಬುದನ್ನು ಕಡೆಗಣಿಸುತ್ತಿದೆ. ಇದನ್ನು ಗಮನಿಸಿದರೆ ಇಲ್ಲಿ ಜಾತಿಯತೆಯ ಪ್ರಮಾಣ ಮತ್ತು ಕರ್ತವ್ಯ ನಿರ್ಲಕ್ಷ್ಯತೆ ಕಂಡು ಬರುತ್ತದೆ. ಈ ಬೆಳವಣಿಗೆಗಳಿಂದ ಭಾರತದ ಸಂವಿಧಾನ ಶಿಲ್ಪಿಯ ಹೆಸರಿಗೆ ಮಸಿ ಬಳಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ, ಜಾಗ, ಕಟ್ಟಡ, ನಿಲ್ದಾಣಗಳಿಗೆ ಯಾವುದೇ ಹೆಸರಿಟ್ಟರೂ ಅದೇ ಹೆಸರು ಮುಂದುವರಿಯಬೇಕು. ಆದರೆ ಇಲ್ಲಿ ಮಾತ್ರ ಜಾತಿಯತೆಯ ಪರಿಣಾಮ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ನಿರ್ಲಕ್ಷ್ಯತೆಗೊಳಗಾಗಿದೆ. ಅಧಿಕಾರಿಗಳು ಈ ಬಗ್ಗೆ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಹೀಗೆಯೇ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಅಪಮಾನಿಸುವುದು ಮುಂದುವರಿದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಮಹೇಶ್, ದಂಟರಮಕ್ಕಿ ಶ್ರೀನಿವಾಸ್, ಕೃಷ್ಣಪ್ಪ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.







