ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಅಧಿಕಾರಿಗಳೇ ಹೊಣೆ: ವಿದ್ಯಾರ್ಥಿ ನಿಲಯದ ಅಧಿಕಾರಿಗಳಿಗೆ ಲೋಬೊ ಎಚ್ಚರಿಕೆ
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

ಮಡಿಕೇರಿ, ಅ.26: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಅನುತ್ತೀರ್ಣರಾದಲ್ಲಿ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಮನ್ವಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೊ ಎಚ್ಚರಿಕೆ ನೀಡಿದ್ದಾರೆ.
ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜೆ.ಆರ್.ಲೋಬೊ ಮಾತನಾಡಿದರು. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ಪಡೆಯುವಂತಾಗಲು ಪ್ರತಿ ವಿದ್ಯಾರ್ಥಿ ನಿಲಯಗಳಿಗೆ ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಮನ್ವಯ ಅಧಿಕಾರಿಯನ್ನಾಗಿ ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದರು. ಸರಕಾರ ವಿದ್ಯಾರ್ಥಿ ನಿಲಯ ಗಳಿಗಾಗಿ ಸಾಕಷ್ಟು ಮೂಲ ಸೌಲಭ್ಯ ಗಳನ್ನು ಒದಗಿಸುತ್ತಿದೆ. ಸಂಜೆ ವೇಳೆ ಪಾಠ ಮಾಡಲು ವಿಶೇಷ ಶಿಕ್ಷಕರನ್ನೂ ಸಹ ನಿಯೋಜಿಸಿದೆ. ಆದರೂ ವಿದ್ಯಾರ್ಥಿ ನಿಲಯದ ಕೆಲವು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಯಾಕೆ ಎಂದು ಸಮಿತಿ ಅಧ್ಯಕ್ಷರು ಪ್ರಶ್ನಿಸಿದರು. ಸರಕಾರ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದು, ಅಧಿಕಾರಿಗಳು ಬದ್ಧತೆ ಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಸರಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಲಹೆ ಪಡೆದು ಸಮ
ನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಪ್ರಗತಿ ಸಾಧ್ಯ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಸರಕಾ ರದ ಯೋಜನೆಗಳನ್ನು ತಲುಪಿಸಿದ್ದಲ್ಲಿ ಶೇ.75ರಷ್ಟು ಜನರಿಗೆ ಕಾರ್ಯಕ್ರಮಗಳು ಎಟುಕಿದಂತಾಗುತ್ತದೆ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಮುದಾಯ ಭವನ ಕಾಮಗಾರಿ ಪ್ರಗತಿ, ಶಾದಿ ಮಹಲ್‌ಗಳ ನಿರ್ಮಾಣ, ಚರ್ಚ್ ನವೀಕರಣ ಮತ್ತು ದುರಸ್ತಿ ಪ್ರಗತಿ ಮತ್ತಿತರ ಸಂಬಂಧ ಮಾಹಿತಿ ಪಡೆದು ಶೇಕಡಾವಾರು ಗುರಿ ಸಾಧಿಸಬೇಕೆಂದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಸ್ವಾವಲಂಬನೆ, ಅರಿವು, ಶ್ರಮಶಕ್ತಿ ಮತ್ತಿತರ ಯೋಜನೆಗಳ ಪ್ರಗತಿ ಸಾಧಿಸಬೇಕು. ಅರ್ಹರಿಗೆ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ಗ್ರಾಪಂ ಮಟ್ಟದಲ್ಲಿ ಮಾಹಿತಿ ನೀಡುವತ್ತ ಗಮನಹರಿಸಬೇಕಿದೆ ಎಂದು ಅವರು ಹೇಳಿದರು. ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಮತ್ತಿತರ ಸಂಬ
ಂಧ ಅವರು ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಸಮಿತಿ ಸದಸ್ಯರಾದ ಮಂಕಾಳ ಸುಬ್ಬ ವೈದ್ಯ, ಸದಸ್ಯರಾದ ನರೇಂದ್ರ ಸ್ವಾಮಿ, ಯು.ಬಿ. ಬಣಕಾರ್, ಅಬ್ದುಲ್ ಜಬ್ಬಾರ್ ಮಾತನಾಡಿದರು. ಸಮಿತಿ ಸದಸ್ಯರಾದ ಸತೀಶ್ ಕೃಷ್ಣ ಸೈಲ್, ಶಾರದಾ ಪೂರ್ಯ ನಾಯ್ಕ, ಕೆ.ಎಂ.ತಿಮ್ಮರಾಯಪ್ಪ, ಸಮಿತಿ ಉಪ ಕಾರ್ಯದರ್ಶಿ ಅಂಬಾ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಏಕಾಂತಪ್ಪ, ವಸತಿ ಶಿಕ್ಷಣ ಸಂಸ್ಥೆಗಳ ಜಂಟಿ ನಿರ್ದೇಶಕ ದೇವರಾಜು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಗದೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ ಕೆ.ವಿ.ಸುರೇಶ್, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚೆನ್ನರಸೇ ಗೌಡ ಮತ್ತಿತರರು ಹಾಜರಿದ್ದರು.







