ಮತ್ತೆ ಜೊತೆಯಾದ ಸಾನಿಯಾ-ಹಿಂಗಿಸ್

ಸಿಂಗಾಪುರ, ಅ.26: ಸಿಂಗಾಪುರದಲ್ಲಿ ಈ ವಾರ ಆರಂಭವಾಗಲಿರುವ ಡಬ್ಲುಟಿಎ ಫೈನಲ್ಸ್‌ನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಮತ್ತೊಮ್ಮೆ ಜೊತೆಯಾಗಿ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ.
ಇಂಡೋ-ಸ್ವಿಸ್ ಜೋಡಿ ಸಾನಿಯಾ-ಹಿಂಗಿಸ್ ಕಳೆದ ಆಗಸ್ಟ್‌ನಲ್ಲಿ ಒಟ್ಟಿಗೆ ಡಬಲ್ಸ್ ಪಂದ್ಯ ಆಡುವುದನ್ನು ನಿಲ್ಲಿಸಿದ್ದರು.
ಸತತ 41 ಪಂದ್ಯಗಳನ್ನು ಜಯಿಸಿದ್ದ ಸಾನಿಯಾ ಹಾಗೂ ಹಿಂಗಿಸ್ ವಿಶ್ವದ ನಂ.1 ಜೋಡಿ ಆಗಿ ಹೊರಹೊಮ್ಮಿದ್ದರು. 2015ರಲ್ಲಿ ಇಂಡಿಯನ್ ವೇಲ್ಸ್ ಟೂರ್ನಿಯ ವೇಳೆ ಡಬಲ್ಸ್ ಪಂದ್ಯ ಆಡಲು ಆರಂಭಿಸಿದ್ದ ಈ ಜೋಡಿ 3 ಗ್ರಾನ್‌ಸ್ಲಾಮ್ ಪ್ರಶಸ್ತಿ ಹಾಗೂ 11 ಡಬ್ಲುಟಿಎ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.
ಡಬ್ಲುಟಿಎ ಫೈನಲ್ಸ್ ಟೂರ್ನಿಯಲ್ಲಿ ಸಾನಿಯಾ-ಹಿಂಗಿಸ್ ಎರಡನೆ ಶ್ರೇಯಾಂಕ ಪಡೆದಿದ್ದಾರೆ. ಫ್ರೆಂಚ್ ಜೋಡಿ ಕ್ಯಾರೊಲಿನಾ ಗಾರ್ಸಿಯಾ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್ ಅಗ್ರ ಶ್ರೇಯಾಂಕ ಪಡೆದಿದ್ದಾರೆ.
ಸಾನಿಯಾ ಅವರು ಹಿಂಗಿಸ್‌ರಿಂದ ಬೇರ್ಪಟ್ಟ ಬಳಿಕ ಝೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೀಕೊವಾರೊಂದಿಗೆ ಡಬಲ್ಸ್ ಪಂದ್ಯ ಆಡುತ್ತಿದ್ದಾರೆ.





