ಎಂಆರ್‌ಪಿಎಲ್ ರಸ್ತೆ ದುರಸ್ತಿ
ಅಲ್ಪಾವಧಿ ಟೆಂಡರ್ ಮೂಲಕ ಕಾಮಗಾರಿ: ಮೇಯರ್
ಮಂಗಳೂರು, ಅ.26: ಎಂಆರ್‌ಪಿಎಲ್ ರಸ್ತೆ ದುರಸ್ತಿ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಲ್ಪಾವಧಿ ಟೆಂಡರ್‌ನ ಪ್ರಸ್ತಾಪ ಮಂಡನೆ ಯಾಗಲಿದೆ ಎಂದು ಮನಪಾ ಮೇಯರ್ ಹರಿನಾಥ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವತಿಯಿಂದ ಶೇ.30 ಹಾಗೂ ಎಂಆರ್‌ಪಿಎಲ್ ಮತ್ತು ಇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶೇ.70 ಅನುದಾನದಲ್ಲಿ 1.50 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈ ರಸ್ತೆಯನ್ನು ಎರಡು ವರ್ಷಗಳ ಅವಧಿಗೆ ಟೆಂಡರ್‌ದಾರರೇ ನಿರ್ವಹಣೆ ಮಾಡಬೇಕೆಂಬ ಷರತ್ತು ವಿಧಿಸಲಾಗಿದೆ. ಮುಂದೆ 45 ಕೋ.ರೂ. ವೆಚ್ಚದಲ್ಲಿ ಈ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವ ಯೋಜನೆ ಇದೆ ಎಂದು ಮೇಯರ್ ತಿಳಿಸಿದರು. ನವೆಂಬರ್ ತಿಂಗಳಲ್ಲಿ ತುಂಬೆ ಹಳೆ ಡ್ಯಾಂಗೆ ಗೇಟ್ ಅಳವಡಿಸ ಲಾಗುವುದು. ಐದು ಮೀಟರ್ ನೀರು ಸಂಗ್ರಹಕ್ಕೆ ಸಂಬಂಧಿಸಿ 41 ಎಕರೆ ಭೂಮಿ ಮುಳುಗಡೆ ಕುರಿತಂತೆ ಸಮೀಕ್ಷೆ ನಡೆದಿದ್ದು, ವರದಿ ಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. 50 ಕೋ.ರೂ. ಪರಿಹಾರ ಅಂದಾಜಿಸ ಲಾಗಿದೆ. ಅಣೆಕಟ್ಟಿನಲ್ಲಿ 7 ಮೀಟರ್‌ವರೆಗೆ ನೀರು ನಿಲ್ಲಿಸುವಾಗ ಮುಳುಗಡೆಯಾಗುವ ಪ್ರದೇಶದ ಜನರಿಗೆ ಒಟ್ಟು 250 ಕೋ.ರೂ.ಗಳ ಪರಿಹಾರದ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.





