ಸೌದಿಯ ಮರುಭೂಮಿಯಲ್ಲಿ ತಂಪೆರೆದ ಮಳೆ!
.gif)
ಯಾನ್ಬು(ಸೌದಿ ಅರೇಬಿಯಾ), ಅ.27: ಇಂದು ಮುಂಜಾನೆ ಎಂದಿನಂತೆ ಬಾಗಿಲು ತೆರೆದು ಮನೆಯಿಂದ ಹೊರಬಂದಾಗ ಇಲ್ಲಿನ ನಿವಾಸಿಗಳಿಗೆ ಅಚ್ಚರಿ ಹಾಗೂ ಸಂತಸವೊಂದು ಕಾದಿತ್ತು. ಅದೇನೆಂದರೆ ತಂಪೆರೆಯುತ್ತಿದ್ದ ಅನಿರೀಕ್ಷಿತ ಮಳೆ!
ಉರಿಬಿಸಿಲು ದಿನನಿತ್ಯದ ಸಂಗಾತಿಯಾಗಿರುವ ಸೌದಿ ಅರೇಬಿಯಾದ ಯಾನ್ಬುವಿನಲ್ಲಿ ಅಪರೂಪದ ‘ಅತಿಥಿ’ಯಾಗಿ ಕಾಣಿಸಿಕೊಂಡ ಮಳೆ ಜನರಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಯಾನ್ಬು ಪ್ರದೇಶವು ಜಿದ್ದಾದಿಂದ ಸುಮಾರು 350 ಕಿ.ಮೀ. ದೂರದಲ್ಲಿದೆ. ದಿನವಿಡೀ ಎ.ಸಿ.ಯಡಿ ಕಳೆಯುವ ಇಲ್ಲಿನ ಜನತೆಗೆ ಮನೆಯ ಹೊರಗೂ ತಂಪಿನ ಅನುಭವ ಮುದ ನೀಡಿತ್ತು.
ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸಣ್ಣ ಗುಡುಗಿನ ಸದ್ದಿನೊಂದಿಗೆ ಆರಂಭಗೊಂಡ ಮಳೆ ಸುಮಾರು ಒಂದೂವರೆ ಗಂಟೆಗಳ ಕಾಲ ಅಂದರೆ, 8:30ರವರೆಗೆ ಸುರಿಯಿತು. ಮಳೆ ನಿಂತ ಮೇಲೂ ಬೀಸುತ್ತಿದ್ದ ತಂಗಾಳಿ ಮೈಮನಸ್ಸಿಗೆ ಆನಂದವನ್ನುಂಟು ಮಾಡಿದವು.
ವರ್ಷಗಳ ಬಳಿಕ:
ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಮಳೆಯೇ ಸುರಿದಿರಲಿಲ್ಲ ಎಂದು ಇಲ್ಲಿನ ಅನಿವಾಸಿ ಭಾರತೀಯ ಫೈಝಲ್ ಮಲಪ್ಪುರಂ ಹೇಳುತ್ತಾರೆ. ಆದ್ದರಿಂದ ಅಪರೂಪದ ಅತಿಥಿಯಾಗಿ ಕಾಣಿಸಿಕೊಂಡ ಮಳೆಗೆ ಅಲ್ಲಲ್ಲಿ ಮಕ್ಕಳು ಮೈಯೊಡುತ್ತಿದ್ದರು.
ಹಕ್ಕಿಗಳಲ್ಲಿ ಹುರುಪು:
ದಿನನಿತ್ಯ ಬಿರುಬಿಸಿಲಿನಲ್ಲಿ ನೀರಸವಾಗಿ ಹಾರಾಡುತ್ತಿದ್ದ ಹಕ್ಕಿಗಳು ಆಗಸದಲ್ಲಿ ನಲಿದಾಡುತ್ತಿದ್ದವು.
ನೆನೆದ ಬಟ್ಟೆಗಳು:
ಬೆಳಗ್ಗಿನ ವೇಳೆ ಒಣಗಿರುತ್ತದೆ ಎಂಬ ಖಾತ್ರಿಯೊಂದಿಗೆ ರಾತ್ರಿ ಮನೆಯ ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳು ಮಳೆಯಲ್ಲಿ ನೆಂದದ್ದನ್ನು ನಗು ತರಿಸುತ್ತಿದ್ದವು. ವರ್ಷವಿಡೀ ಬಿಸಿಲಿನ ಬೇಗೆಯಲ್ಲಿ ಹಬೆಯಾಡುತ್ತಿದ್ದ ವಾಹನಗಳು ಇಂದು ಕೆಸೆರನ್ನೆರಚುತ್ತಾ ಸಾಗುತ್ತಿರುವುದು ಊರಿನ ನೆನಪನ್ನು ಮನದಲ್ಲಿ ಮೂಡಿಸಿದವು. ಮಳೆ ನಿಂತ ಬಳಿಕ ಸೂರ್ಯ ಕಾಣಿಸಿಕೊಂಡರೂ ಎಂದಿನ ಸೆಖೆ ಇರಲಿಲ್ಲ.







