ದಿನಗೂಲಿ ಕೆಲಸದಿಂದ ವಿದೇಶಿ ವಿವಿಯಲ್ಲಿ ಡಾಕ್ಟರೇಟ್ ಪದವಿಯವರೆಗೆ...
ಆಕೆಯ ಧನ್ಯವಾದ ಪಟ್ಟಿಯಲ್ಲಿ ಯಾರು ಯಾರೆಲ್ಲಾ ಇದ್ದಾರೆ ನೋಡಿ

ನಿಮ್ಮನ್ನು ಕೊಲ್ಲಲಾಗದ ಕಷ್ಟ ನಿಮ್ಮನ್ನು ಬಲಿಷ್ಠಗೊಳಿಸುತ್ತದೆ ಎನ್ನುತ್ತಾರೆ. ಇತ್ತೀಚೆಗೆ ಸ್ವೀಡನ್‌ನ ಲಂಡ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದ ಕೇರಳದ ಈ ವಿದ್ಯಾರ್ಥಿಯ ವಿಷಯದಲ್ಲೂ ಇದು ನಿಜವಾಗಿದೆ.
ಬಿಂದು ಕುಮಾರ್ ಕರಿಂಗನ್ನೂರು ಸೋಮವಾರ ತಮ್ಮ ಕೊಲ್ಲಂ ಜಿಲ್ಲೆಯಲ್ಲಿರುವ ಬಡ ಕುಟುಂಬದಿಂದ ವಿದೇಶಿ ವಿದ್ಯಾಲಯದ ವಿದ್ಯಾರ್ಥಿಯಾಗಿ ಡಾಕ್ಟರೇಟ್ ಪದವಿ ಪಡೆದವರೆಗಿನ ಪ್ರಯಾಣವನ್ನು ಫೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ಜೀವನ ಪ್ರಯಾಣದಲ್ಲಿ ನೆರವಾದ ಎಲ್ಲರನ್ನೂ ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
"ಇತರರ ಒತ್ತಾಯಕ್ಕೆ ಮಣಿದು ತಮ್ಮ ಮಗಳನ್ನು ಶಾಲೆಗೆ ಕಳುಹಿಸಿದ ನನ್ನ ಅನಕ್ಷರಸ್ಥ ಹೆತ್ತವರಿಗೆ ಧನ್ಯವಾದ ಅರ್ಪಿಸಲೇಬೇಕು. ದೇವರಿಗೆ, ದೇವರಂತೆ ನೆರವಾದ ಹಲವರಿಗೂ ನನ್ನ ವಂದನೆಗಳು. ಮೊದಲನೆಯದಾಗಿ ಶುಕ್ಲ ಕಟ್ಟದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸದಾ ನನ್ನ ಹೆಸರಿದ್ದರೂ ನನಗೆಂದೂ ಬೈಯದೆ ಇದ್ದ ಅಧ್ಯಾಪಕರನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಬಿಂದು ಮಲಯಾಳಂನಲ್ಲಿ ಬರೆದಿದ್ದಾರೆ. 10ನೆ ತರಗತಿ ಪಾಸಾದಾಗಿನ ಅಧ್ಯಾಪಕರೊಬ್ಬರ ನೆರವನ್ನೂ ಅವರು ನೆನಪಿಸಿಕೊಂಡರು. "ನಾನು 10ನೆ ತರಗತಿ ಪಾಸಾದ ಮೇಲೆ ಜಾನ್ಸನ್ ಸರ್ ಮನೆಗೆ ದಿನಗೂಲಿ ಕೆಲಸಕ್ಕೆ ಹೋಗಿದ್ದೆ. ಅವರ ಮನೆಯಲ್ಲಿ ಸೆಗಣಿ ಎತ್ತುವಾಗ ನೆರವಾದ ಸರ್ ತಮ್ಮ ಕಣ್ಣನ್ನು ಬೇರೆಡೆಗೆ ತಿರುಗಿಸಿದ್ದರು. ಅವರು ನನ್ನನ್ನು ಆ ಸ್ಥಿತಿಯಲ್ಲಿ ನೋಡಲು ಬಯಸುತ್ತಿಲ್ಲ ಎನ್ನುವುದು ಆಗಲೇ ನನಗೆ ಗೊತ್ತಾಗಿತ್ತು." ಎಂದು ಬಿಂದು ವಿವರಿಸಿದ್ದರು.
ಬಿಂದು ತಮ್ಮ ಕಾಲೇಜು ಸಹಪಾಠಿಗಳು ಬಡತನಕ್ಕಾಗಿ ಕಡಿಮೆ ಎಂದು ತಿಳಿಯದೆ ಇದ್ದ ಬಗ್ಗೆಯೂ ಮತ್ತು ದುಡ್ಡಿಲ್ಲದಿದ್ದರೂ ಟಿಕೆಟ್ ಇಲ್ಲದೆ ಪ್ರಯಾಣಿಸಲು ಬಿಡುತ್ತಿದ್ದ ಕಂಡಕ್ಟರ್ ಬಗ್ಗೆಯೂ ಬರೆದಿದ್ದಾರೆ. ಫೇಸ್‌ಬುಕ್‌ನಲ್ಲಿ ಈಗ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ ಬಿಂದು ಬರೆದ ಈ ಪೋಸ್ಟ್. "ಮಗಳು 10ನೆ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಬಗ್ಗೆ ತಿಳಿಸಿದಾಗ ಅಮ್ಮ ಕೆಲಸ ಮಾಡುತ್ತಿದ್ದ ಸ್ಥಳದ ಮಾಲಕರು ಉನ್ನತ ವ್ಯಾಸಂಗಕ್ಕಾಗಿ ರೂ. 200 ಹೆಚ್ಚುವರಿ ಕೊಡಲು ನಿರ್ಧರಿಸಿದ್ದರು. ಚಪ್ಪಲಿ ಅಂಗಡಿ ಮಾಲಕ ಹಣ ತೆಗೆದುಕೊಳ್ಳದೇ ಹೊಸ ಚಪ್ಪಲಿಗಳನ್ನು ಕೊಡುತ್ತಿದ್ದ. ಕಾಲೇಜು ಪ್ರವಾಸದಲ್ಲಿ ಹೋಗಲು ನನಗೂ ಅವಕಾಶ ಸಿಗಲು ನನ್ನ ಸಹಪಾಠಿಗಳು ರೂ. 50ನ್ನು ಹೆಚ್ಚುವರಿಯಾಗಿ ಭರಿಸುತ್ತಿದ್ದರು. ನಾನು ಉತ್ತಮ ಕುಲದ ಮಕ್ಕಳ ಜೊತೆಗೆ ಹೋಗುತ್ತಿದ್ದೇನೆ ಎಂದುಕೊಂಡು ಸಾಲಿಯಣ್ಣನ್ ಕೈ ಖರ್ಚಿಗೆ ಎಂದು ಸ್ವಲ್ಪ ದುಡ್ಡನ್ನು ಕೊಡುತ್ತಿದ್ದರು" ಎಂದು ಬಿಂದು ತಮ್ಮ ಜೀವನ ಪಯಣದಲ್ಲಿ ನೆರವಾದವರಿಗೆಲ್ಲ ಧನ್ಯವಾದ ಹೇಳಿದ್ದಾರೆ. ಈ ಪೋಸ್ಟ್ ಜೊತೆಗೆ ಬಿಂದು ವಿಶ್ವವಿದ್ಯಾಲಯದ ಕೆಲವು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
ಕೃಪೆ: http://www.thenewsminute.com/







