ಸಮಾನ ನಾಗರೀಕ ಸಂಹಿತೆ ಕೇವಲ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ : ಉವೈಸಿ
ಇವರ ಪ್ರಕಾರ ಇದನ್ನು ವಿರೋಧಿಸುವವರು ಯಾರು ಯಾರು ?

ಹೈದರಾಬಾದ್ ಅ. 27 : ಸಮಾನ ನಾಗರಿಕ ಸಂಹಿತೆ ಕೇವಲ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿರುವ ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಈಶಾನ್ಯ ಭಾಗದ, ಮುಖ್ಯವಾಗಿ ನಾಗಾಲ್ಯಾಂಡ್ ಹಾಗೂ ಮಿಜೋರಾಂನ ಜನರೂ ಅದನ್ನು ವಿರೋಧಿಸಬಹುದು ಎಂದರು. ದೇಶದವೈವಿಧ್ಯತೆಯನ್ನುಮುಗಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದೂ ಅವರು ಆರೋಪಿಸಿದರು.
‘‘ಮುಸ್ಲಿಮರನ್ನು ವೈರಿಗಳನ್ನಾಗಿಸಿಆ ವಿಚಾರದಲ್ಲೇ ಧ್ರುವೀಕರಣ ಸಾಧಿಸುವುದು ಬಿಜೆಪಿಯ ಉದ್ದೇಶವಾಗಿದೆ. ಸಮಾನ ನಾಗರಿಕ ಸಂಹಿತೆ ವಿಚಾರದಲ್ಲಿ ಜನರು ಅವರ ಆಟವನ್ನು ನೋಡಿದ್ದಾರೆ’’ ಎಂದು ಉವೈಸಿ ಹೇಳಿದರು.
‘‘ಹಿಂದೂ ಅವಿಭಜಿತ ಕುಟುಂಬಗಳಿಗೆ ನೀಡಲಾಗುವ ಸವಲತ್ತುಗಳನ್ನು ಕ್ರೈಸ್ತರಿಗೆ ಹಾಗೂ ಮುಸ್ಲಿಮರಿಗೇಕೆ ನೀಡಲಾಗುತ್ತಿಲ್ಲ ? ಅವರಿಗೂ ಅದರ ಪ್ರಯೋಜನವನ್ನು ವಿಸ್ತರಿಸಬೇಕು. ಧಾರ್ಮಿಕ ಕಾನೂನುಗಳು ಭಾರತದಲ್ಲಿರಬಾರದು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳುತ್ತಾರಾದರೆ ಹಿಂದೂ ಅವಿಭಜಿತ ಕುಟುಂಬ, ಹಿಂದೂ ವಿವಾಹ ಕಾಯ್ದೆ ಹಾಗೂ ಹಿಂದೂ ಉತ್ತರಾಧಿಕಾರ ಕಾಯ್ದೆಯೆಂದರೇನು ’’ ಎಂದು ಅವರು ಪ್ರಶ್ನಿಸಿದರು.
ಕಾನೂನು ಆಯೋಗವು ಈಗಾಗಲೇ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳಿಗೆ ಸಮಾನ ನಾಗರಿಕ ಸಂಹಿತೆಯ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಹೇಳಿದೆ. ಈ ಬಗ್ಗೆ ಪ್ರಶ್ನಾವಳಿಯನ್ನು ಕಳುಹಿಸಲಾಗಿದ್ದುಪಕ್ಷಗಳು ತಮ್ಮ ಅಭಿಪ್ರಾಯವನ್ನು ನವೆಂಬರ್ 21 ರೊಳಗಾಗಿ ತಿಳಿಸಬೇಕಿದೆ.
ಸಮಾನ ನಾಗರಿಕ ಸಂಹಿತೆಯನ್ನು ಹಿಂದಿನ ಬಾಗಿಲಿನಿಂದ ಹಾಗೂ ಒಮ್ಮತವಿಲ್ಲದೆ ಜಾರಿಗೆ ತರಲಾಗುವುದಿಲ್ಲ ಎಂದು ವೆಂಕಯ್ಯ ನಾಯ್ಡು ಈಗಾಗಲೇ ಹೇಳಿದ್ದಾರೆ.







