ಸುಡಾನೀ ಸಯಾಮಿ ಅವಳಿಗಳನ್ನು ಬೇರ್ಪಡಿಸಲು ವೈದ್ಯರು ಸಜ್ಜು

ರಿಯಾದ್(ಸೌದಿ ಅರೇಬಿಯಾ),ಅ.27: ಸುಡಾನಿನ ಸಯಾಮಿ ಅವಳಿಗಳಾದ ರಮಾಹ್ ಮತ್ತು ವದಾಹ್ ಅವರನ್ನು ಬೇರ್ಪಡಿಸಲು ರಿಯಾದ್‌ನ ಕಿಂಗ್ ಅಬ್ದುಲ್‌ಅಜೀಜ್ ಮೆಡಿಕಲ್ ಸಿಟಿಯ ಕಿಂಗ್ ಅಬ್ದುಲ್ಲಾ ವಿಶೇಷ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ತಂಡವು ಸಜ್ಜಾಗಿದೆ. ನಾಡಿದ್ದು ಶನಿವಾರ ಈ ಅಪರೂಪದ ವೈದ್ಯಕೀಯ ಪ್ರಯತ್ನ ನಡೆಯಲಿದೆ.
ದೊರೆ ಸಲ್ಮಾನ್ ಬಿನ್ ಅಬ್ದುಲ್‌ಅಝೀಝ್ ಅವರ ನಿರ್ದೇಶದ ಮೇರೆಗೆ ಈ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಸೌದಿಯ ಸರಕಾರಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಈ ಬೇರ್ಪಡಿಸುವಿಕೆ ಶಸ್ತ್ರಚಿಕಿತ್ಸೆಯು ಒಂಬತ್ತು ಹಂತಗಳಲ್ಲಿ ನಡೆಯಲಿದ್ದು,ಪೂರ್ತಿ 15 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಅರಿವಳಿಕೆ,ಮಕ್ಕಳ ಸರ್ಜರಿ,ಪ್ಲಾಸ್ಟಿಕ್ ಸರ್ಜರಿ,ಮೂಳೆ, ಯೂರಾಲಜಿ ಸೇರಿದಂತೆ 28 ತಜ್ಞವೈದ್ಯರು ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಸ್ತ್ರಚಿಕಿತ್ಸೆಯು ಯಶಸ್ವಿಯಾಗುವ ಶೇ.70ರಷ್ಟು ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ನೇತೃತ್ವ ವಹಿಸಲಿರುವ ಮುಖ್ಯವೈದ್ಯ ಅಬ್ದುಲ್ಲಾ ಬಿನ್ ಅಬ್ದುಲ್‌ಅಝೀಝ್ ಅಲ್-ರಬಿಯ ಅವರು ತಿಳಿಸಿದರು.
ಈ ತಿಂಗಳ ಆರಂಭದಲ್ಲಿ ಸೌದಿಯ ಸಯಾಮಿ ಅವಳಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದ ಬಳಿಕ ಇಂತಹ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದರಲ್ಲಿ ಸೌದಿ ಅರೇಬಿಯಾ ಮುಂಚೂಣಿಯಲ್ಲಿದೆ.





