ದುಬೈ ಕೀರ್ತಿ ಪಟ್ಟಿಗೆ ಇನ್ನೊಂದು ಸೇರ್ಪಡೆ
ಬರಲಿದೆ ವಿಶ್ವದಲ್ಲೇ ಪ್ರಪ್ರಥಮ ವಿನೂತನ ಯೋಜನೆ
.jpeg)
ದುಬೈ, ಅ. 27: ಇನ್ನೊಂದು ಜಾಗತಿಕ ಸಾಧನೆಗಾಗಿ ದುಬೈ ಸುದ್ದಿಯಲ್ಲಿದೆ. ಇಲ್ಲಿ ಜಗತ್ತಿನ ಪ್ರಥಮ, ಸಸ್ಯರಾಶಿಯ ಅಚ್ಚರಿಗಳನ್ನೊಳಗೊಂಡ ಪ್ರಕೃತಿಯಿಂದ ಪ್ರೇರಣೆ ಪಡೆಯುವ ಮಾಲ್ ಒಂದು ತಲೆಯೆತ್ತಲಿದೆ.
1.1 ಬಿಲಿಯ ದಿರ್ಹಮ್ (ಸುಮಾರು 2,000 ಕೋಟಿ ರೂಪಾಯಿ) ವೆಚ್ಚದ ಭವ್ಯ ‘ಸಿಟಿಲ್ಯಾಂಡ್ ಮಾಲ್’ 2018ರ ಎರಡನೆ ತ್ರೈಮಾಸಿಕದಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ.
ಜಾಗತಿಕ ಪ್ರವಾಸಿಗರ ನೂತನ ಆಕರ್ಷಣೀಯ ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಈ ಯೋಜನೆಯ ಸೃಷ್ಟಿಕರ್ತರು ಸಿಟಿಲ್ಯಾಂಡ್ ಗ್ರೂಪ್. ಈ ಸಮೂಹವು ಈಗಾಗಲೇ ‘ದುಬೈ ಮಿರಾಕಲ್ ಗಾರ್ಡನ್’ ಮತ್ತು ‘ದುಬೈ ಬಟರ್‌ಫ್ಲೈ ಗಾರ್ಡನ್’ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿದೆ.
ಪ್ರಕೃತಿ ಪ್ರೇರಿತ ಮಾಲ್ ‘ಗ್ಲೋಬಲ್ ವಿಲೇಜ್’ನೊಂದಿಗೆ ಸಂಪರ್ಕ ಹೊಂದಿದ್ದು, ಸಿಂಗಲ್-ಲೆವೆಲ್ ಶಾಪಿಂಗ್ ಕಾಂಪ್ಲೆಕ್ಸ್ ಹೊಂದಿದೆ. ಆವರಣದಲ್ಲಿ 11.3 ಲಕ್ಷ ಚದರ ಅಡಿ ವ್ಯಾಪಾರ ಸ್ಥಳವಿದೆ ಹಾಗೂ ಮಾಲ್‌ನ ಉದ್ದಗಲವನ್ನು ದಟ್ಟ ಹಸಿರು ಆವರಿಸಿದೆ.
ಆ್ಯಂಫಿತಿಯೇಟರ್, ಮಿನಿ ವಾಟರ್ ಪಾರ್ಕ್ ಮತ್ತು ಮಿನಿ ಮಿರಾಕಲ್ ಗಾರ್ಡನ್‌ಗಳು ಮಾಲ್‌ನ ವಿಶೇಷ ಆಕರ್ಷಣೆಯಾಗಿದೆ. ಈ ಶಾಪಿಂಗ್ ಮಾಲ್ ಕೌಟುಂಬಿಕ ಮನರಂಜನೆಗೆ ಹೊಸ ವ್ಯಾಖ್ಯೆಯನ್ನು ನೀಡಲಿದೆ ಹಾಗೂ ಇಲ್ಲಿ ಶ್ರೇಷ್ಠ ಖರೀದಿ ಅನುಭವದ ಜೊತೆಗೆ ಪರಿಸರ ಸಂರಕ್ಷಣೆಯ ಭಾವ, ಸುಸ್ಥಿರ ವಿನ್ಯಾಸದ ಅನುಭೂತಿ ಮತ್ತು ಪರಿಸರದೊಂದಿಗಿನ ಸಂವಹನ ಅನುಭವವೂ ದೊರೆಯುತ್ತದೆ ಎಂದು ಸಿಟಿಲ್ಯಾಂಡ್ ಗ್ರೂಪ್‌ನ ಅಧ್ಯಕ್ಷ ಶೇಖ್ ತೇಯಬ್ ಬಿನ್ ತಹ್ನೂನ್ ಅಲ್ ನಹ್ಯಾನ್ ಹೇಳಿದರು.
ನೂತನ ಪ್ರಕೃತಿ ಮಾಲ್‌ಗೆ ವಾರ್ಷಿಕ 1.2 ಕೋಟಿ ಸಂದರ್ಶಕರು ಭೇಟಿ ನೀಡುವ ನಿರೀಕ್ಷೆಯನ್ನು ಸಿಟಿ ಲ್ಯಾಂಡ್ ಗ್ರೂಪ್ ಹೊಂದಿದೆ. ಜೊತೆಗೆ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ವೃದ್ಧಿಯಾಗಲಿದೆ.







