ಉಚಿತ ಎಮಿರೇಟ್ಸ್ ಏರ್ ಟಿಕೆಟ್ ಪ್ರಚಾರದ ಹಿಂದಿನ ಅಸಲಿಯತ್ತೇನು ಗೊತ್ತೇ ?

ದುಬೈ, ಅ.27: ಎಮಿರೇಟ್ಸ್ ವರ್ಷಾಚರಣೆಯ ಅಂಗವಾಗಿ ಎಮಿರೇಟ್ಸ್ ಏರ‍್ ಲೈನ್ಸ್ ಸಂಸ್ಥೆ ಉಚಿತ ಎಮಿರೇಟ್ಸ್ ಟಿಕೆಟ್ ನೀಡುವ ಯಾವುದೇ ಸ್ಪರ್ಧೆಯನ್ನು ಆಯೋಜಿಸಿಲ್ಲ. ಜನರನ್ನು ಹಾದಿ ತಪ್ಪಿಸುವ ರೀತಿಯಲ್ಲಿ ನಕಲಿ ಸ್ಪರ್ಧೆ ಮತ್ತು ಬಹುಮಾನ ನೀಡುವ ನಿಟ್ಟಿನಲ್ಲಿ ನಿರತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಮಿರೇಟ್ಸ್ ವಿಮನಯಾನ ಎಚ್ಚರಿಕೆ ನೀಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಯೊಂದು ವ್ಯಾಪಕವಾಗಿ ಹರಿದಾಡಿದ್ದು ಅದು ಬಳಕೆದಾರರನ್ನು ನಕಲಿ ವೆಬ್‌ಸೈಟ್‌ಗೆ ಕೊಂಡೊಯ್ದಿದಿತ್ತು. ಸಂಕ್ಷಿಪ್ತ ಸಮೀಕ್ಷೆಯೊಂದರಲ್ಲಿ ಪಾಲ್ಗೊಂಡವರಿಗೆ ಎಮಿರೇಟ್ಸ್ 259 ವಿಮಾನ ಯಾನ ಟಿಕೆಟ್‌ಗಳನ್ನು ಉಚಿತವಾಗಿ ನೀಡುವುದಾಗಿ ಅದು ಭರವಸೆ ನೀಡಿತ್ತು.ಎಮಿರೇಟ್ಸ್ ತನ್ನ 31ನೇ ವಾರ್ಷಿಕೋತ್ಸವವನ್ನು ಮಂಗಳವಾರ ಆಚರಿಸುತ್ತಿದೆಯಾದರೂ, ವಾಟ್ಸಾಪ್ ಸಂದೇಶಗಳು ಎಮೀರೇಟ್ಸ್ 30ನೇ ವರ್ಷಾಚರಣೆಯ ಅಂಗವಾಗಿ ಈ ಉಚಿತ ವಿಮಾನಯಾನ ಟಿಕೆಟ್ ಗಳನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿತ್ತು.
"ಯಾರಿಗಾದರೂ ಇಂತಹ ಸಂದೇಶಗಳು ಬಂದರೆ ಅವುಗಳನ್ನು ಲಿಂಕ್‌ಗಳಿಗಾಗಿ ಕ್ಲಿಕ್ ಮಾಡದಿರುವಂತೆ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಸ್ನೇಹಿತರಿಗೆ ರವಾನಿಸದಿರುವಂತೆ ಎಮಿರೇಟ್ಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಎಮಿರೇಟ್ಸ್ ಸಂಸ್ಥೆ ಈ ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಯಾರು ಇಂತಹ ಕೃತ್ಯದಲ್ಲಿ ತೊಡಗಿದ್ದಾರೋ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಎಮಿರೇಟ್ಸ್ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.







