ಕೋಮುದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
ಮಂಗಳೂರು, ಅ. 27: ನವೆಂಬರ್ 10ರಂದು ಸ್ವಾತಂತ್ರಾ ಹೋರಾಟಗಾರ ಮೈಸೂರಿನ ಹುಲಿ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಿಸಲು ಸಂಘ, ಸಂಸ್ಥೆಗಳಿಗೆ ಪೊಲೀಸ್ ಭದ್ರತೆ ನೀಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಒತ್ತಾಯಿಸಿದ್ದಾರೆ.
ಕಳೆದ ವರ್ಷದಿಂದ ಕರ್ನಾಟಕ ಸರಕಾರ ಅಧೀಕೃತವಾಗಿ ನವೆಂಬರ್ 10ರಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿರ್ಧರಿಸಿದೆ. ಆ ಪ್ರಕಾರ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಕಳೆದ ವರ್ಷ ಅಲ್ಪಸಂಖ್ಯಾತ ಇಲಾಖೆಯಿಂದ ಭೃಂಜಣೆಯಿಂದ ಆಚರಿಸಲಾಗಿದೆ. ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅದ್ದೂರಿಯಾಗಿ ಆಚರಿಸಲು ಸರಕಾರ ಆದೇಶಿಸಿರುತ್ತದೆ. ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರಕಾರವೇ ಎಲ್ಲಾ ಕೇಂದ್ರಗಳಲ್ಲಿ ಅದ್ಧೂರಿಯಾಗಿ ನಡೆಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೆಲವು ಕಡೆ ಸ್ವಯಂಪ್ರೇರಿತವಾಗಿ ಕೆಲವೊಂದು ಸಂಘ ಸಂಸ್ಥೆಗಳು ಕೂಡ ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬರುತ್ತಿರುವ ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮವನ್ನು ಮಾಡಲು ಪೊಲೀಸ್ ಇಲಾಖೆಗಳು ಸರಿಯಾದ ರೀತಿಯಲ್ಲಿ ಅನುಮತಿ ಕೊಡದೇ ಅಲೆದಾಡಿಸುತ್ತಿದೆ ಮತ್ತು ಸಂಘಪರಿವಾರದವರು ಟಿಪ್ಪು ಜಯಂತಿಯನ್ನು ವಿರೋಧಿಸುವುದರೊಂದಿಗೆ ಮುಸ್ಲಿಂ ಸಮುದಾಯದ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋಮುದ್ವೇಷವನ್ನು ಹರಡಿಸಲು ಯತ್ನಿಸುತ್ತಿದೆ. ಉದಾಹರಣೆಗೆ ಮಂಗಳೂರಿನ ಕದ್ರಿಯಲ್ಲಿ ನಡೆದ ಬಜರಂಗದಳದ ಪ್ರಾಂತ ಅಧಿವೇಶನದ ಸಮಾರೋಪ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿಶ್ವ ಹಿಂದೂ ಪರಿಷತ್‌ನ ಸಹ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಮಾತನಾಡಿ ‘‘ಭಾರತೀಯ ಮುಸಲ್ಮಾನರ ಡಿ.ಎನ್.ಎ ಪರೀಕ್ಷೆ ಮಾಡಿದರೆ ಅವರೆಲ್ಲರೂ ಹಿಂದುಗಳೇ ಆಗಿದ್ದಾರೆ’’ ಎಂದು ಹೇಳಿ ಬಜರಂಗದಳದ ಕಾರ್ಯಕರ್ತರಿಗೆ ಮುಸಲ್ಮಾನರ ಮೇಲೆ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ದಾಳಿ ನಡೆಸಲು ಕರೆ ನೀಡಿರುತ್ತಾರೆ. ಅಲ್ಲದೇ ಇಸ್ಲಾಮಿನ ವಿರುದ್ಧವಾಗಿ ಮತ್ತು ಸಂವಿಧಾನದ ವಿರುದ್ಧವಾಗಿ ಮುಸಲ್ಮಾನರ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಭಾಷಣಗೈದು ಕೋಮು ಭಾವನೆಯನ್ನು ಕೆರಳಿಸಿದ್ದಾರೆ. ಅದೇ ರೀತಿ ಟಿಪ್ಪು ಜಯಂತಿಯನ್ನು ಆಚರಿಸಿದರೆ ಇಡೀ ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ಇಡೀ ಕರ್ನಾಟಕದ ಜನತೆಗೆ ಬೆದರಿಕೆಯ ಸಂದೇಶವನ್ನು ನೀಡಿದ್ದಾರೆ. ಹಾಗೆಯೇ ಟಿಪ್ಪು ಜಯಂತಿಯನ್ನು ತಡೆಯಲಿಕ್ಕಾಗಿ ಸಂಘಪರಿವಾರ ಗ್ರಾಮ ಮಟ್ಟದಲ್ಲಿ ಯುವಕರ ಪಡೆಯನ್ನು ಸ್ಥಾಪಿಸಿರುವುದು ಗೃಹ ಇಲಾಖೆಗೆ ತಿಳಿದಿರುವ ವಿಚಾರವಾಗಿದೆ ಮಾತ್ರವಲ್ಲದೆ ಅವರು ಬಹಿರಂಗ ಪಡಿಸಿರುತ್ತಾರೆ. ಈ ಎಲ್ಲಾ ಘಟನೆಯನ್ನು ಎಸ್‌ಡಿಪಿಐ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಹನೀಫ್ ಖಾನ್ ಕೊಡಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಿಪ್ಪು ಜಯಂತಿಯನ್ನು ನಡೆಸುವವರಿಗೆ ಸೂಕ್ತವಾದ ಭದ್ರತೆಯನ್ನು ನೀಡಬೇಕು. ಕೋಮುಗಲಭೆಗೆ ಪ್ರಚೋದನೆ ನೀಡುವವರ ಬಗ್ಗೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.







