ಸುಳ್ಯದಲ್ಲಿ ವಿಕಲಚೇತನರಿಗೆ ಸವಲತ್ತು ವಿತರಣೆ
.jpg)
ಸುಳ್ಯ, ಅ.27: ವಿಕಲಚೇತನರಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ವೀಲ್ ಚೆಯರ್ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸರಕಾರದಿಂದ ಹಾಗೂ ಸಂಘ-ಸಂಸ್ಥೆಗಳಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ವಿಕಲಚೇತನರು ಮುಖ್ಯವಾಹಿನಿಗೆ ಬರಬೇಕು ಎಂದವರು ಕರೆ ನೀಡಿದರು.
ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ ಮಾತನಾಡಿ, ಸವಲತ್ತುಗಳ ಸದುಪಯೋಗ ಪಡೆಯಬೇಕೆಂದರು.
ಸಿಡಿಪಿಒ ಸುಕನ್ಯಾ ಮಾತನಾಡಿ, ವಿಕಲಚೇತನ ಇಲಾಖೆಯಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಬೆಂಗಳೂರಿನ ಆಲಿಮ್ಕೋ ಸಂಸ್ಥೆಯವರು ವಿಕಲಚೇತನರಿಗೆ ಅಗತ್ಯ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಾಕಿಕೊಂಡಿದ್ದರು.
ಆಲಿಮ್ಕೋ ಅಧಿಕಾರಿ ಕಿರಣ್‌ಚಂದ್ರ ಮಾತನಾಡಿ, 3 ತಿಂಗಳ ಹಿಂದೆ ವಿಕಲಚೇತನರ ತಪಾಸಣೆ ನಡೆಸಿದ್ದು, ಅರ್ಹ 70 ಫಲಾನುಭವಿಗಳಿಗೆ ಸವಲತ್ತು ವಿತರಿಸುತ್ತಿರುವುದಾಗಿ ಹೇಳಿದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದಾ ಎಸ್.ರೈ, ಸದಸ್ಯ ತೀರ್ಥರಾಮ ಜಾಲ್ಸೂರು, ನಗರ ಪಂಚಾಯತ್ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಪ್ರಕಾಶ್ ಹೆಗ್ಡೆ, ಮೀನಾಕ್ಷಿ, ಗೋಪಾಲ ನಡುಬೈಲು, ಗಿರೀಶ್ ಕಲ್ಲುಗದ್ದೆ, ಕಿರಣ ಕುರುಂಜಿ, ಶ್ರೀಲತಾ ಪ್ರಸನ್ನ, ಮುಖ್ಯಾಧಿಕಾರಿ ಚಂದ್ರಕುಮಾರ್, ವಿಕಲಚೇತನರ ಪುನರ್ವಸತಿ ಕೇಂದ್ರದ ತಾಲೂಕು ಸಂಯೋಜಕ ಚಂದ್ರಶೇಖರ್ ವೇದಿಕೆಯಲ್ಲಿದ್ದರು. ಪ್ರವೀಣ್ ನಾಯಕ್ ಸ್ವಾಗತಿಸಿ, ಪುಟ್ಟಣ್ಣ ವಂದಿಸಿದರು.







