ಕಾಸರಗೋಡು ಜಿಲ್ಲೆಯ 8 ಗುಂಪು ಗ್ರಾಮಕಚೇರಿಗಳ ವಿಭಜನೆ

ಕಾಸರಗೋಡು, ಅ.27: ಕಾಸರಗೋಡು ತಾಲೂಕಿನ ಎಂಟು ಗುಂಪು ಗ್ರಾಮ ಕಚೇರಿಗಳನ್ನು ವಿಭಜಿಸಲಾಗುವುದೆಂದು ಕಂದಾಯ ಖಾತೆ ಸಚಿವ ಇ.ಚಂದ್ರ ಶೇಖರನ್ ತಿಳಿಸಿದ್ದಾರೆ.
ಈ ಕುರಿತು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಂಡಿಸಿದ ನಿಲುವಳಿ ಗೊತ್ತುವಳಿಗೆ ಸಚಿವರು ಈ ಭರವಸೆ ನೀಡಿದ್ದಾರೆ. ಕಾಸರಗೋಡು ತಾಲೂಕಿನ ಆದೂರು ಕಾರಡ್ಕ, ಚೆಂಗಳ ಮುಟ್ಟತ್ತೋಡಿ, ಕಾಸರಗೋಡು ಅಡ್ಕತ್ತಬೈಲು, ಕೂಡ್ಲುಮೊಗ್ರಾಲ್, ಪುತ್ತೂರು ಶಿರಿಬಾಗಿಲು, ಕಾರಡ್ಕ ಉಬ್ರಂಗಳ, ಮಧೂರು ಪಟ್ಲ, ನೆಟ್ಟಣಿಗೆ ಬೆಳ್ಳೂರು ಮತ್ತು ಪಾಡಿನೆಕ್ರಾಜೆ ಗುಂಪು ಗ್ರಾಮಗಳಿದ್ದು, ಇವುಗಳನ್ನು ವಿಭಜಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಗುಂಪು ಗ್ರಾಮಗಳನ್ನು ವಿಭಜಿಸದ ಹಿನ್ನೆಲೆಯಲ್ಲಿ ಈ ಗ್ರಾಮಗಳ ನಾಗರಿಕರು ಅಗತ್ಯದ ಪ್ರಮಾಣ ಪತ್ರಗಳನ್ನು ಪಡೆಯಲು ಸಂಕಷ್ಟಪಡುತ್ತಿದ್ದಾರೆ. ಅಲ್ಲದೆ ಪ್ರಮಾಣ ಪತ್ರಗಳು ಸಕಾಲದಲ್ಲಿ ಲಭಿಸದೆ ವಿಳಂಬಗೊಳ್ಳುತ್ತಿವೆ. ಮಾತ್ರವಲ್ಲದೆ, ಹಲವು ಗ್ರಾಮಗಳ ಹೊಣೆಗಾರಿಕೆಯನ್ನು ಒಂದೇ ಗ್ರಾಮ ಕಚೇರಿಗಳು ವಹಿಸಬೇಕಾಗಿ ಬರುತ್ತಿರುವುದರಿಂದ ಅಂತಹ ಗ್ರಾಮ ಕಚೇರಿಗಳ ಸಿಬ್ಬಂದಿಗೆ ಕೆಲಸದ ಒತ್ತಡ ಉಂಟಾಗುತ್ತಿದೆ ಎಂಬ ದೂರು ಈ ಹಿಂದೆಯೇ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರಕಾರ ಮುಂದಾಗಿದೆ.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿದಾಗ ಕಂದಾಯ ಇಲಾಖೆಯಲ್ಲಿ ಹೊಸ ಹುದ್ದೆಗಳನ್ನು ಒದಗಿಸಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಈಗಿರುವ ಸಿಬ್ಬಂದಿಯನ್ನು ವಿಭಜಿಸಿ ಗುಂಪು ಗ್ರಾಮಗಳನ್ನು ವಿಭಜಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಭೂಕಂದಾಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಗುಂಪು ಗ್ರಾಮ ಕಚೇರಿಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಎದುರಿಸುತ್ತಿರುವ ಕೆಲಸದ ಹೊರೆ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದೆಂದು ಸಚಿವರು ತಿಳಿಸಿದ್ದಾರೆ. ದಶಕಗಳಿಂದ ಅಸ್ತಿತ್ವದಲ್ಲಿರುವ ಗುಂಪು ಗ್ರಾಮಗಳನ್ನು ವಿಭಜಿಸುವಂತೆ ಹಲವು ಸಮಯಗಳಿಂದ ಒತ್ತಡ ಕೇಳಿ ಬರುತ್ತಿದ್ದು, ಇದೀಗ ರಾಜ್ಯ ಸರಕಾರ ಇದಕ್ಕೆ ಅಸ್ತು ಅಂದಿರುವುದು ಕಚೇರಿಗಳ ಸಿಬ್ಬಂದಿ ಮತ್ತು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.







