ಅ.28ರಂದು ಹುಟ್ಟೂರಿಗೆ ಯೋಧ ಏಕನಾಥ ಶೆಟ್ಟಿಯವರ ಸೇನಾ ಸಮವಸ್ತ್ರ

ಬೆಳ್ತಂಗಡಿ, ಅ.27: ನಾಪತ್ತೆಯಾಗಿರುವ ಗುರುವಾಯನಕರೆಯ ಯೋಧ ಏಕನಾಥ ಶೆಟ್ಟಿ ಅವರ ಮೃತದೇಹ ಸಿಗದಿರುವ ಹಿನ್ನೆಲೆಯಲ್ಲಿ ಅವರ ಸೇನಾ ಸಮವಸ್ತ್ರವನ್ನು ಅವರ ಮನೆಗೆ ಅ.28ರಂದು ಸಕಲ ಸೇನಾ ಗೌರವದೊಂದಿಗೆ ಸೇನೆ ತರಲಿದೆ.
ಚೆನ್ನೈನಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ ಜು.22 ರಂದು ಹೊರಟಿದ್ದ ಸೇನಾ ವಿಮಾನವು ಬಂಗಾಲಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು. ಅದರಲ್ಲಿ ನಾಪತ್ತೆಯಾಗಿದ್ದ 29 ಸೈನಿಕರಲ್ಲಿ ಏಕನಾಥ ಶೆಟ್ಟಿ ಒಬ್ಬರಾಗಿದ್ದರು. ಸೇನೆ ವಿಮಾನಕ್ಕಾಗಿ ಸತತ ಹುಡುಕಾಟ ನಡೆಸುತ್ತಿತ್ತು. ಆದರೆ ಸಮುದ್ರದಲ್ಲಿ ಯೋಧರ ಮೃತದೇಹಗಳಾಗಲೀ, ವಿಮಾನದ ಕುರುಹುಗಳಾಗಲೀ ಇದುವರೆಗೆ ಕಂಡುಬರದ ಹಿನ್ನೆಲೆಯಲ್ಲಿ ಯೋಧರು ಮೃತಪಟ್ಟಿದ್ದಾರೆ ಎಂದು ಸೇನೆ ಘೋಷಿಸಿದೆ.
ಹೀಗಾಗಿ ಯೋಧ ಏಕನಾಥ ಶೆಟ್ಟಿ ಅವರ ಸೇನಾ ಸಮವಸ್ತ್ರಗಳನ್ನು ಸೇನೆಯ ಅಧಿಕಾರಿಗಳು ಸಕಲ ಗೌರವಗಳೊಂದಿಗೆ ಹುಟ್ಟೂರಿಗೆ ತಂದು ಮನೆಯವರಿಗೆ ಹಸ್ತಾಂತರಿಸಲಿದ್ದಾರೆ. ಸಮವಸ್ತ್ರದೊಂದಿಗೆ ರೈಲಿನಲ್ಲಿ ಮಂಗಳೂರಿಗೆ ಸೇನಾ ಅಧಿಕಾರಿಗಳು ಬರಲಿದ್ದಾರೆ. ಬೆಳಗ್ಗೆ ಸುಮಾರು 8:30ಕ್ಕೆ ಮಡಂತ್ಯಾರಿಗೆ ಬಂದು ಬಳಿಕ ಅಲ್ಲಿಂದ ಮೆರವಣಿಗೆಯ ಮೂಲಕ ಸೇನಾ ಗೌರವದೊಂದಿಗೆ ಸಮವಸ್ತ್ರವನ್ನು ಗುರುವಾಯನಕೆರೆಗೆ ತರಲಿದ್ದಾರೆ.
1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಯಾದ ಏಕನಾಥ ಶೆಟ್ಟಿ (48)ಯವರು ಎಮ್‌ಆರ್‌ಸಿಗೆ ಸೇರಿಕೊಂಡಿದ್ದರು. ಸೇನೆಯಲ್ಲಿ ಸುಭೇದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1986ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೆ ಜಮ್ಮು ಕಾಶ್ಮೀರ, ಅರುಣಾಚಲ, ಪಂಜಾಬ್ ಮೊದಲಾಡೆ ಸೇವೆ ಸಲ್ಲಿಸಿದ್ದರು. 2009ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ನಿವೃತ್ತರಾದ ಮೂರೇ ತಿಂಗಳಲ್ಲಿ ಅವರು ವಾಯುಸೇನೆಯ ಡಿಫೆನ್ಸ್ ಸೆಕ್ಯೂರಿಟಿ ಫೋರ್ಸ್‌ಗೆ ಸೇರಿಕೊಂಡರು. ಕಣ್ಣೂರಿನಲ್ಲಿ ತರಬೇತಿ ಮುಗಿಸಿ ಕಾನ್ಪುರ, ಗೋವಾದಲ್ಲಿ ಸೇವೆ ಸಲ್ಲಿಸಿ ಇದೀಗ ಕಳೆದ 2 ವರ್ಷಗಳಿಂದ ಪೋರ್ಟ್‌ಬ್ಲೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2017 ಜನವರಿಯಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗುವವರಿದ್ದರು.







