1970ರ ಬಳಿಕ ವನ್ಯಜೀವಿಗಳ ಸಂಖ್ಯೆಯಲ್ಲಿ 60 ಶೇ. ಕುಸಿತ
ಪರಿಸರ ಸಂಸ್ಥೆ ಡಬ್ಲ್ಲುಡಬ್ಲುಎಫ್ ಇಂಟರ್‌ನ್ಯಾಶನಲ್ ವರದಿ

ಓಸ್ಲೊ, ಅ. 27: ಜಾಗತಿಕ ಮಟ್ಟದಲ್ಲಿ ಸಸ್ತನಿಗಳು, ಹಕ್ಕಿಗಳು, ಮೀನುಗಳು, ಉಭಯವಾಸಿಗಳು ಮತ್ತು ಸರೀಸೃಪಗಳ ಸಂಖ್ಯೆ 1970ರ ಬಳಿಕ ಬಹತೇಕ 60 ಶೇಕಡದಷ್ಟು ಕಡಿಮೆಯಾಗಿದೆ ಎಂದು ಪರಿಸರ ಸಂಸ್ಥೆ ಡಬ್ಲ್ಲುಡಬ್ಲುಎಫ್ ಗುರುವಾರ ಹೇಳಿದೆ.
ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್ (ಝಡ್‌ಎಸ್‌ಎಲ್)ನಿಂದ ಪಡೆದ ಜೀವವೈವಿಧ್ಯಗಳ ಉಪಸ್ಥಿತಿಯನ್ನು ಸೂಚಿಸುವ ದತ್ತಾಂಶಗಳ ವಿಶ್ಲೇಷಣೆಯಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ. 1970ರಿಂದ 2012ರ ವೇಳೆಗೆ ಜೀವವೈವಿಧಗಳು 58 ಶೇಕಡದಷ್ಟು ಕಡಿಮೆಯಾಗಿವೆ ಹಾಗೂ ಇದೇ ಪ್ರವೃತ್ತಿ ಮುಂದುವರಿದರೆ 2020ರ ವೇಳೆಗೆ ಇದು 67 ಶೇಕಡದಷ್ಟು ಕುಸಿಯಲಿದೆ ಎಂದು ಡಬ್ಲ್ಲುಡಬ್ಲುಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪೃಕೃತಿ ಮೇಲಿನ ಮಾನವ ಹಸ್ತಕ್ಷೇಪವೇ ಇದಕ್ಕೆ ಕಾರಣ ಎಂದು ವರದಿ ಅಭಿಪ್ರಾಯಪಟ್ಟಿದೆ.
ಭೂಮಿಯಲ್ಲಿ ಆಗುತ್ತಿರುವ ಬದಲಾವಣೆಯ ಪ್ರಧಾನ ಚಾಲಕ ಶಕ್ತಿ ಮನುಷ್ಯನೇ ಎನ್ನುವುದಕ್ಕೆ ಜೈವಿಕ ವೈವಿಧ್ಯಗಳಲ್ಲಿನ ಸಂತತಿಯ ಕುಸಿತ ಪುರಾವೆ ಒದಗಿಸಿದೆ.
ಪರಿಸರ ಸಂರಕ್ಷಣೆಯ ಪ್ರಯತ್ನಗಳು ಯಾವುದೇ ಪರಿಣಾಮ ಬೀರುತ್ತಿಲ್ಲ ಎಂದು ಡಬ್ಲ್ಲುಡಬ್ಲುಎಫ್ ಹೇಳಿದೆ. ಎರಡು ವರ್ಷಗಳ ಹಿಂದಿನ ವನ್ಯಜೀವಿಗಳ ಸಂಖ್ಯೆಗೆ ಹೋಲಿಸಿದರೆ, ಈಗ 52 ಶೇಕಡದಷ್ಟು ಕುಸಿತವಾಗಿದೆ ಎಂದಿದೆ.
‘‘ವನ್ಯಜೀವಿಗಳು ನಮ್ಮ ಜೀವಿತಾವಧಿಯಲ್ಲೇ ಅಭೂತಪೂರ್ವ ದರದಲ್ಲಿ ಕಣ್ಮರೆಯಾಗುತ್ತಿವೆ’’ ಎಂದು ಡಬ್ಲ್ಲುಡಬ್ಲುಎಫ್ ಇಂಟರ್‌ನ್ಯಾಶನಲ್‌ನ ಮಹಾನಿರ್ದೇಶಕ ಮಾರ್ಕೊ ಲ್ಯಾಂಬರ್ಟಿನಿ ಹೇಳುತ್ತಾರೆ.





