ಗೂಢಚರ್ಯೆ ಆರೋಪದಲ್ಲಿ ಪಾಕಿಸ್ತಾನಿ ದೂತಾವಾಸ ಅಧಿಕಾರಿ ವಶಕ್ಕೆ

ಹೊಸದಿಲ್ಲಿ, ಅ.27: ಗೂಢಚರ್ಯೆ ಜಾಲವೊಂದರಲ್ಲಿ ಒಳಗೊಂಡಿದ್ದ ಆರೋಪದಲ್ಲಿ ಇಲ್ಲಿನ ಪಾಕಿಸ್ತಾನಿ ದೂತಾವಾಸದ ಅಧಿಕಾರಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಭಾರತ-ಪಾಕ್ ಗಡಿಯಲ್ಲಿ ಬಿಎಸ್‌ಎಫ್ ನಿಯೋಜನೆಯ ವಿವರ ಹಾಗೂ ಸೂಕ್ಷ್ಮ ರಕ್ಷಣಾ ದಾಖಲೆಗಳನ್ನು ಐಎಸ್‌ಐಯೊಂದಿಗೆ ಹಂಚಿಕೊಳ್ಳುವಿಕೆಯಲ್ಲಿ ಈ ಜಾಲ ಸಕ್ರಿಯವಾಗಿತ್ತೆನ್ನಲಾಗಿದೆ.
ಪಾಕಿಸ್ತಾನಿ ದೂತಾವಾಸದ ವೀಸಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಮೆಹ್ಮೂದ್ ಅಖ್ತರ್ ಎನ್ನುವ ಈ ಅಧಿಕಾರಿ, ತನ್ನಿಬ್ಬರು ಸಹಚರರೊಂದಿಗೆ ಸೇರಿ ಮಹತ್ವದ ವಿವರಗಳನ್ನು ಪಡೆದುಕೊಳ್ಳುತ್ತಿದ್ದನು. ಆತನ ಸಹಚರರನ್ನೂ ಬಂಧಿಸಲಾಗಿದೆ. ಅಖ್ತರ್‌ಗೆ ರಾಜತಾಂತ್ರಿಕ ರಕ್ಷಣೆಯಿರುವ ಕಾರಣ ಪೊಲೀಸರು ಆತನನ್ನು ಸುದೀರ್ಘ ವಿಚಾರಣೆಯ ಬಳಿಕ ಬಿಡುಗಡೆ ಮಾಡಿದ್ದಾರೆ.
ಆರೋಪಿಗಳು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ಗೂಢಚರ್ಯೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ತಾವು 6 ತಿಂಗಳುಗಳೀಂದ ಅವರ ಚಟುವಟಿಕೆಗಳ ಮೇಲೆ ಕಣ್ಣಿರಿಸಿದ್ದೆವು. ಖಚಿತ ಮಾಹಿತಿಯ ಮೇರೆಗೆ ಅವರನ್ನು ಬುಧವಾರ ಸೆರೆ ಹಿಡಿಯಲಾಯಿತು. ಅಖ್ತರ್ ಗುಪ್ತಚರ ಜಾಲದ ಮುಖ್ಯಸ್ಥನಾಗಿದ್ದನೆಂದು ಜಂಟಿ ಪೊಲೀಸ್ ಆಯುಕ್ತ ಆರ್.ಎಸ್. ಯಾದವ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು
ಅಖ್ತರ್ ಆಧಾರ್ ಕಾರ್ಡನ್ನು ನಕಲು ಮಾಡಿ, ತನ್ನ ಸಂಗಾತಿಗಳಿಗೆ ಭಾರೀ ಹಣ ನಿಡಿ ಮಾಹಿತಿ ಖರೀದಿಸಲು ಉಪಯೋಗಿಸಿದ್ದನೆಂದು ಅವರು ಹೇಳಿದರು.
ಬಂಧಿತರಿಬ್ಬರನ್ನು ರಾಜಸ್ಥಾನದ ವೌಲಾನಾ ರಂಝಾನ್ ಹಾಗೂ ಸುಭಾಶ್ ಜಾಂಗಿರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಶುಐಬ್ ಎಂದು ಗುರುತಿಸಲಾಗಿರುವ ಜೋಧಪುರದ ವ್ಯಕ್ತಿಯನ್ನು ಶೀಘ್ರವೇ ಬಂಧಿಸಲಾಗುವುದೆಂದು ಯಾದವ್ ತಿಳಿಸಿದರು.







