ದುಬೈ: 60 ಕೋಟಿ ರೂ. ನಂಬರ್ ಪ್ಲೇಟಿನ ಕಾರ್ ಮಾಲಕನಿಗೆ ದಂಡ: ಪ್ರಕರಣದಲ್ಲಿ ಹೊಸ ಬೆಳವಣಿಗೆ
.jpg)
ದುಬೈ, ಅ.27: 60 ಕೋಟಿ ಕೊಟ್ಟು ವಿಶಿಷ್ಟ ನಂಬರ್ ಪ್ಲೇಟ್ ಖರೀದಿಸಿದ ಬೆನ್ನಿಗೆ ತಪ್ಪು ಸ್ಥಳದಲ್ಲಿ ಪಾರ್ಕಿಂಗ್ ಮಾಡಿ ದಂಡ ಪಾವತಿಸಿ ಮುಖಭಂಗಕ್ಕೀಡಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಅನಿವಾಸಿ ಭಾರತೀಯ ಮಿಲಿಯನೇರ್ ಬಲವಿಂದರ್ ಸಾಹ್ನಿ ಅವರ ಚಾಲಕ ಅಂಗವಿಕಲರಿಗೆ ಮೀಸಲು ಜಾಗದಲ್ಲಿ ತಮ್ಮ ವಿಲಾಸಿ ರೋಲ್ಸ್ ರಾಯ್ಸ್ ಪಾರ್ಕ್ ಮಾಡಿದ್ದ ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವ್ಯಕ್ತಿಯನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಸೈಬರ್ ಕಾನೂನು ಪ್ರಕಾರ ಈತನಿಗೆ ಸುಮಾರು 6 ತಿಂಗಳ ಜೈಲು ಶಿಕ್ಷೆ ಹಾಗು 150,000 ದಿಂದ 300,000 ದಿರ್ಹಮ್ ದಂಡ ಬೀಳುವ ಸಾಧ್ಯತೆ ಇದೆ.
ತಮ್ಮ ಕಾರು ತಪ್ಪು ಸ್ಥಳದಲ್ಲಿ ಪಾರ್ಕ್ ಆಗಿ ದಂಡ ಪಾವತಿಸಬೇಕಾಗಿ ಬಂದಿದ್ದು ಮತ್ತು ಅದರ ವೀಡಿಯೊ ವೈರಲ್ ಆಗಿದ್ದು ಸಾಹ್ನಿ ಪಾಲಿಗೆ ಭಾರೀ ಇರಿಸು ಮುರುಸು ಉಂಟು ಮಾಡಿತ್ತು.
"ನಮ್ಮ ಕಾರು ತಪ್ಪು ಸ್ಥಳದಲ್ಲಿ ಪಾರ್ಕ್ ಆಗಿರಲಿಲ್ಲ. ನಮ್ಮ ಬಳಿ ಹೆಚ್ಚು ಲಗೇಜ್ ಇದ್ದುದರಿಂದ ಚಾಲಕ ಕೇವಲ 30 ಸೆಕೆಂಡುಗಳ ಕಾಲ ಅಲ್ಲಿ ತಂದು ನಿಲ್ಲಿಸಿದ್ದ" ಎಂದು ಸಾಹ್ನಿ ಸಮರ್ಥಿಸಿಕೊಂಡಿದ್ದರು.
ವೀಡಿಯೊ ಹಾಕಿದಾತನ ಬಂಧನಕ್ಕೆ ಸಂತಸ ವ್ಯಕ್ತ ಪಡಿಸಿರುವ ಸಾಹ್ನಿ "ಸೈಬರ್ ಕಾನೂನು ಮುರಿದ ಆತನನ್ನು ಬಂಧಿಸಿ ದುಬೈ ಪೊಲೀಸರು ನನಗೆ ನನ್ನ ಹಕ್ಕು ಮರಳಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು" ಎಂದು ಪ್ರತಿಕ್ರಿಯಿಸಿದ್ದಾರೆ.





