ದುಷ್ಟಶಕ್ತಿಗಳ ನಿವಾರಣೆಗಾಗಿ ಬಾಲಕಿಯನ್ನು ಜೀವಂತ ಹುಗಿದರು!
ಮೀರತ್,ಅ.27: ಹೈವೋಲ್ಟೇಜ್ ತಂತಿ ತಗಲಿ ತೀವ್ರ ವಿದ್ಯುದಾಘಾತಕ್ಕೊಳಗಾಗಿದ್ದ 12ರ ಹರೆಯದ ಬಾಲಕಿಯನ್ನು ದುಷ್ಟಶಕ್ತಿಯ ನಿವಾರಣೆಗಾಗಿ ಆಕೆಯ ಕುಟುಂಬದವರೇ ಮಣ್ಣಿನಲ್ಲಿ ಹೂತುಹಾಕಿದ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಉಸಿರಾಡಲು ಸಾಧ್ಯವಾಗುವಂತೆ ಆಕೆಯ ಮುಖ ಮಾತ್ರ ನೆಲದ ಮೇಲಿತ್ತು.
ವಿದ್ಯುದಾಘಾತದ ದುಷ್ಟ ಪರಿಣಾಮವನ್ನು ಭೂಮಿಯು ಹೀರಿಕೊಳ್ಳುತ್ತದೆ ಎಂಬ ನಂಬಿಕೆಯಿಂದ ಹೀಗೆ ಮಾಡಿದ್ದಾಗಿ ಬಾಲಕಿಯ ತಾಯಿ ಫರೀದಾ ಬೇಗಂ ಮತ್ತು ಕುಟುಂಬದವರು ಹೇಳಿಕೊಂಡಿದ್ದಾರೆ. ಬಾಲಕಿಯ ಸ್ಥಿತಿ ತೀರ ಗಂಭೀರಗೊಂಡಾಗ ಸ್ಥಳೀಯರು ಆಕೆಯನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಾಲಕಿಯ ಬಲಗೈ ಮತ್ತು ಕಾಲಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದವು.
ಮುಸ್ಕಾನ್ ಮನೆಯ ಛಾವಣಿಯ ಮೇಲೆ ಆಟವಾಡಿಕೊಂಡಿದ್ದಾಗ ಸಮೀಪದಲ್ಲೇ ಹಾದು ಹೋಗಿರುವ 33ಕೆ.ವಿ.ಯ ಹೈಟೆನ್ಶನ್ ವಿದ್ಯುತ್ ತಂತಿ ತಗಲಿತ್ತು. ಭಾರೀ ಸ್ಫೋಟವಾಗಿ ಬಾಲಕಿ ಕುಸಿದು ಬಿದ್ದು ಪ್ರಜ್ಞಾಹೀನಳಾಗಿದ್ದಳು. ಬಳಿಕ ಕುಟುಂಬದವರು ಸೇರಿ ಆಕೆಯನ್ನು ನೆಲದಲ್ಲಿ ಹುಗಿದಿದ್ದರು.





