ಸುದ್ದಿ ಮಾಧ್ಯಮಗಳ ನಿಯಂತ್ರಣವಿಲ್ಲ
ವೆಂಕಯ್ಯ ನಾಯ್ಡು
ಹೊಸದಿಲ್ಲಿ, ಅ.27: ಪ್ರಜಾಪ್ರಭುತ್ವವೊಂದರಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ ಸಾಧ್ಯವಿಲ್ಲ. ಅದಕ್ಕೆ ಸ್ವ-ನಿಯಂತ್ರಣವೇ ಒಳ್ಳೆಯದೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಿಸಿದ್ದಾರೆ.
ಆದಾಗ್ಯೂ, ಸಾಮಾಜಿಕ ಮಾಧ್ಯಮವು ‘ಅಡ್ಡಾದಿಡ್ಡಿಯಾಗಿ’ ಸಾಗುತ್ತಿದೆಯೆಂಬ ಭಾವನೆ ಸಾಮಾನ್ಯವಾಗಿದೆಯೆಂದು ಅವರು ಹೇಳಿದ್ದಾರೆ.
ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರವನ್ನು ಖಾತ್ರಿಪಡಿಸುವ ಪ್ರಜಾಪ್ರಭುತ್ವ ಅಥವಾ ಸ್ವತಂತ್ರ ಸಮಾಜವೊಂದರಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ ಹೇರುವುದು ಸಾಧ್ಯವಿಲ್ಲ. ಇದು ತನ್ನ ತೀರ್ಮಾನವಾಗಿದೆಯೆಂದು ನಾಯ್ಡು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಸ್ವ-ನಿಯಂತ್ರಣವು ಒಳ್ಳೆಯದು. ಅಗತ್ಯವಾಗಿರುವುದು ಹೊಸ ಮಸೂದೆಯಲ್ಲ. ಬದಲಾಗಿ ರಾಜಕೀಯ ಇಚ್ಛಾಶಕ್ತಿ ಹಾಗೂ ಆಡಳಿತ ಕೌಶಲ ಅವಶ್ಯವಾಗಿದೆ. ಕೆಲವು ಕಡೆ ಅದರ ಕೊರತೆಯಿದೆ. ಆದಾಗ್ಯೂ, ದಿನದ ಅಂತ್ಯದಲ್ಲಿ ಯಾವುದೇ ಉಲ್ಲಂಘನೆಯಾಗಿದ್ದರೆ, ಈಗಾಗಲೇ ಲಭ್ಯವಿರುವ ನೆಲದ ಕಾನೂನುಗಳಿವೆಯೆಂದು ಅವರು ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರದ ವೌಲ್ಯವು ಸಂಪೂರ್ಣ ಶ್ಲಾಘನೆಗೊಳಗಾದಾಗ ಮಾತ್ರ ಅದನ್ನು ಉತ್ತಮವಾಗಿ ಬಳಸಿದಂತಾಗುತ್ತದೆ. ಈ ಸ್ವಾತಂತ್ರವನ್ನು ವಿವೇಕದಿಂದ ಬಳಸದಿದ್ದಾಗ, ನಮ್ಮ ಈಗಿರುವ ಕಾನೂನುಗಳು ಮಧ್ಯಪ್ರವೇಶಕ್ಕೆ ಅವಕಾಶ ಒದಗಿಸುತ್ತವೆ. ಯಾವುದೇ ಮಾಧ್ಯಮದ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುವ ಕುರಿತು ತಾವು ಯೋಚಿಸುತ್ತಿಲ್ಲ. ಆದರೆ, ಬೇರೆ ಬೇರೆ ವೇದಿಕೆಗಳನ್ನು ಉಪಯೋಗಿಸುವಲ್ಲಿ ಸಂಬಂಧಿತರು ಹೊಣೆಗಾರಿಕೆ ತೋರಿಸಬೇಕೆಂಬುದು ಸರಕಾರದ ನಿರೀಕ್ಷೆಯಾಗಿದೆಯೆಂದು ನಾಯ್ಡು ತಿಳಿಸಿದ್ದಾರೆ.





