ಭಾರತದ ಹೊಸ ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ರೂಪಿಂದರ್ ಸಿಂಗ್

ಕ್ವಾಂಟಾನ್, ಅ.27: ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಡ್ರಾಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್, ‘‘ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸುವ ಕರ್ತವ್ಯದಲ್ಲಿ ನಿರತನಾಗಿದ್ದೇನೆ’’ಎಂದು ಹೇಳಿದ್ದಾರೆ.
ರೂಪಿಂದರ್ ವೃತ್ತಿಜೀವನದಲ್ಲಿ ಮೊದಲ ಬಾರಿ ಡ್ರಾಗ್ ಫ್ಲಿಕ್‌ನ ಮೂಲಕ ಹಾಕಿ ಟೂರ್ನಿಯೊಂದರಲ್ಲಿ 10 ಗೋಲುಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ.
ಜಪಾನ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರು ಗೋಲುಗಳನ್ನು ಬಾರಿಸಿದ್ದ ರೂಪಿಂದರ್ ಪಾಕಿಸ್ತಾನ ಹಾಗೂ ಚೀನಾದ ವಿರುದ್ಧ ತಲಾ ಒಂದು ಗೋಲು ಬಾರಿಸಿದ್ದರು. ಸೋಮವಾರ ಮಲೇಷ್ಯಾದ ವಿರುದ್ಧ ಅವಳಿ ಗೋಲು ಬಾರಿಸಿ 2-1 ಅಂತರದ ರೋಚಕ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದರು.
ಶನಿವಾರ ಆರಂಭವಾಗಲಿರುವ ಸೆಮಿ ಫೈನಲ್ ಪಂದ್ಯದಲ್ಲಿ ಇನ್ನಷ್ಟು ಗೋಲುಗಳನ್ನು ಬಾರಿಸುವುದಾಗಿ ಹೇಳಿರುವ ಪೆನಾಲ್ಟಿ ಕಾರ್ನರ್ ಶೂಟರ್ ಸಿಂಗ್,‘‘ ಟೂರ್ನಿಯಲ್ಲಿ ಕನಸಿನ ಓಟವನ್ನು ಮುಂದುವರಿಸಲು ಬಯಸಿದ್ದೇನೆ. ನಿರ್ಣಾಯಕ ಗೋಲು ಬಾರಿಸಿದಾಗ ವಿಶೇಷ ಅನುಭವವಾಗುತ್ತದೆ. ಭಾರತಕ್ಕೆ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಒದಗಿಸಿಕೊಡುವುದು ನನ್ನ ಕೆಲಸ ಎಂದು ರೂಪಿಂದರ್ ಹೇಳಿದ್ದಾರೆ.
ಆರು ವರ್ಷಗಳ ಹಿಂದೆ ಮಲೇಷ್ಯಾದ ಇಪೋದಲ್ಲಿ ಅಂತಾರಾಷ್ಟ್ರೀಯ ಹಾಕಿ ಟೂರ್ನಿಗೆ ಪಾದಾರ್ಪಣೆಗೈದಿರುವ ರೂಪಿಂದರ್, ಮಲೇಷ್ಯಾ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.
‘‘2010ರಲ್ಲಿ ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿಯ ವೇಳೆ ನಾನು ಚೊಚ್ಚಲ ಪಂದ್ಯ ಆಡಿದ್ದೆ. 2011ರಲ್ಲಿ ಇದೇ ಟೂರ್ನಿಯಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿದ್ದೆ. ಇವೆಲ್ಲವೂ ನನ್ನ ವೃತ್ತಿಜೀವನದ ಸ್ಮರಣೀಯ ಕ್ಷಣವಾಗಿವೆ’’ ಎಂದು ಮುಂದಿನ ತಿಂಗಳು 26ನೆ ವರ್ಷಕ್ಕೆ ಕಾಲಿಡಲಿರುವ ರೂಪಿಂದರ್ ಹೇಳಿದ್ದಾರೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತಕ್ಕೆ ಈ ತನಕ ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಅನುಪಸ್ಥಿತಿ ಕಾಡಿಲ್ಲ. ರೂಪಿಂದರ್ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಇನ್ನೋರ್ವ ಶಾರ್ಟ್‌ಕಾರ್ನರ್ ಸ್ಪೆಷಲಿಸ್ಟ್ ಜಸ್ಜಿತ್ ಸಿಂಗ್ ಕುಲಾರ್‌ಗೆ ಹೆಚ್ಚು ಕೆಲಸ ನೀಡಿಲ್ಲ.
ಟೂರ್ನಿಯ ಮೊದಲ ಪಂದ್ಯದಲ್ಲಿ ರೂಪಿಂದರ್ ಜೀವನಶ್ರೇಷ್ಠ ಆರು ಗೋಲುಗಳನ್ನು ಬಾರಿಸಿದ್ದರು. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮೊದಲೇ ರೂಪಿಂದರ್ ಭಾರತದ ಪರ ಈ ವರ್ಷ ಗರಿಷ್ಠ ಗೋಲು ಬಾರಿಸಿದ ಆಟಗಾರನಾಗಿದ್ದರು. ರೂಪಿಂದರ್ 20 ಪಂದ್ಯಗಳಲ್ಲಿ 7 ಗೋಲುಗಳನ್ನು ಬಾರಿಸಿದ್ದರು.







