ಅಶಿಸ್ತಿನ ವರ್ತನೆ: ಸುರೇಂದರ್ ಅಮಾನತು

ಮಲೇಷ್ಯಾ, ಅ.27: ಮಲೇಷ್ಯಾ ವಿರುದ್ಧದ ಲೀಗ್ ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ಹಿನ್ನೆಲೆಯಲ್ಲಿ ಭಾರತದ ಡಿಫೆಂಡರ್ ಸುರೇಂದರ್ ಕುಮಾರ್‌ರನ್ನು ಈಗ ನಡೆಯುತ್ತಿರುವ ನಾಲ್ಕನೆ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನ ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ.
ನೀತಿ ಸಂಹಿತೆಯ ಪ್ರಕಾರ ಸುರೇಂದರ್‌ರನ್ನು ಶಿಸ್ತು ವಿಚಾರಣೆಗೆ ಗುರಿಪಡಿಸಿದ ಏಷ್ಯನ್ ಹಾಕಿ ಫೆಡರೇಶನ್‌ನ ತಾಂತ್ರಿಕ ಸಮಿತಿಯ ರಮೇಶ್, ಸುರೇಂದರ್ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ 2 ಪಂದ್ಯಗಳಿಂದ ಅಮಾನತುಗೊಳಿಸಿದರು.
ಚಾಂಪಿಯನ್ಸ್ ಟ್ರೋಫಿಯಲ್ಲಿ ನೀಡಿದ್ದ ಉತ್ತಮ ಪ್ರದರ್ಶನದ ಆಧಾರದಲ್ಲಿ ಒಲಿಂಪಿಕ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಸುರೇಂದರ್ ಶನಿವಾರದಿಂದ ಆರಂಭವಾಗಲಿರುವ ನಾಕೌಟ್ ಸುತ್ತಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಮೈದಾನದೊಳಗೆ ಎದುರಾಳಿ ಆಟಗಾರನೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣ ಸುರೇಂದರ್ ಹಳದಿ ಕಾರ್ಡ್ ಪಡೆದಿದ್ದರು. ಸುರೇಂದರ್ ಹಾಕಿ ಸ್ಟಿಕ್‌ನ್ನು ಮೇಲಕ್ಕೆತ್ತಿದ್ದಾಗ ಮಲೇಷ್ಯಾ ಆಟಗಾರನ ಗಲ್ಲಕ್ಕೆ ತಾಗಿತ್ತು. ಸುರೇಂದರ್ ನೀಡಿದ ವಿವರಣೆ ಹಾಗೂ ಇತರ ಸಾಕ್ಷಿಯನ್ನು ಪರಿಗಣಿಸಿ ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
ಮಲೇಷ್ಯಾ ವಿರುದ್ಧದ ಅಂತಿಮ ಲೀಗ್ ಪಂದ್ಯದ 49ನೆ ನಿಮಿಷದಲ್ಲಿ ಸುರೇಂದರ್ ಹಳದಿ ಕಾರ್ಡ್ ಪಡೆದು ಮೈದಾನದಿಂದ ನಿರ್ಗಮಿಸಿದ್ದರು. ಸುರೇಂದರ್ ನಿರ್ಗಮನದ ಬಳಿಕ ಭಾರತ 10 ಆಟಗಾರರೊಂದಿಗೆ ಪಂದ್ಯವನ್ನು ಆಡಿತ್ತು. 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಆಟ ಕೊನೆಗೊಳ್ಳಲು ಎರಡು ನಿಮಿಷ ಬಾಕಿ ಇರುವಾಗ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಕಾರ್ನರ್‌ನಲ್ಲಿ ಬಾರಿಸಿದ ಗೋಲಿನ ಸಹಾಯದಿಂದ ಭಾರತ ರೋಚಕ ಜಯ ಸಾಧಿಸಿತ್ತು.
ಮಲೇಷ್ಯಾ ಆಟಗಾರನಿಗೂ 1 ಪಂದ್ಯದಿಂದ ಅಮಾನತು:
ಮೈದಾನದೊಳಗೆ ಅಶಿಸ್ತಿನ ವರ್ತನೆಗೆ ಸಂಬಂಧಿಸಿ ಮಲೇಷ್ಯಾದ ಆಟಗಾರ ಆಶಾರಿ ಫಿರ್ಹಾನ್‌ಗೂ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ.
ಭಾರತದ ಆಟಗಾರ ಆಕಾಶ್ ದೀಪ್ ಸಿಂಗ್‌ಗೆ ಮಲೇಷ್ಯಾದ ಆಟಗಾರ ಆಶಾರಿ ಉದ್ದೇಶಪೂರ್ವಕವಾಗಿ ಮೊಣಕೈಯಿಂದ ತಿವಿದಿದ್ದಾರೆ ಎಂದು ವಿಡಿಯೋ ಸಮೇತ ಟೀಮ್ ಇಂಡಿಯಾ ನೀಡಿದ ದೂರಿನ ಮೇರೆಗೆ ಆಶಾರಿಗೆ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.







