ಡಬ್ಲುಟಿಎ ಫೈನಲ್ಸ್ ಟೂರ್ನಿ: ಸಿಬುಲ್ಕೋವಾ ಸೆಮಿಗೆ
ಸಿಂಗಾಪುರ, ಅ.27: ಸ್ಲೋವಾಕಿಯದ ಡೊಮಿನಿಕಾ ಸಿಬುಲ್ಕೋವಾ ಹಾಗೂ ಆ್ಯಂಜೆಲಿಕ್ ಕೆರ್ಬರ್ ಡಬ್ಲುಟಿಎ ಫೈನಲ್ಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಗುರುವಾರ ಇಲ್ಲಿ ನಡೆದ ತನ್ನ ಕೊನೆಯ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಸಿಬುಲ್ಕೋವಾ ರೊಮಾನಿಯದ ಸಿಮೊನಾ ಹಾಲೆಪ್‌ರನ್ನು 6-3, 7-6(7-5) ಸೆಟ್‌ಗಳ ಅಂತರದಿಂದ ಮಣಿಸಿದರು.
ಅಜೇಯ ಗೆಲುವಿನ ಓಟ ಮುಂದುವರಿಸಿದ ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಅಮೆರಿಕದ ಮ್ಯಾಡಿಸನ್ ಕೆಸ್‌ರನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿದರು. ಜರ್ಮನಿಯ ಕೆರ್ಬರ್ ಎಲ್ಲ 3 ಲೀಗ್ ಪಂದ್ಯಗಳನ್ನು ಜಯಿಸಿದ್ದು, ಮುಂದಿನ ಸುತ್ತಿನಲ್ಲಿ ಸಿಬುಲ್ಕೋವಾರನ್ನು ಎದುರಿಸಲಿದ್ದಾರೆ.
ಈ ಸೋಲಿನೊಂದಿಗೆ ಹಾಲೆಪ್ 7 ಮಿಲಿಯನ್ ಡಾಲರ್ ಬಹುಮಾನ ಮೊತ್ತದ ಟೂರ್ನಮೆಂಟ್‌ನಿಂದ ಹೊರ ನಡೆದಿದ್ದಾರೆ. 2 ವರ್ಷಗಳ ಹಿಂದೆ ನಡದ ಡಬ್ಲುಟಿಎ ಫೈನಲ್ಸ್ ಟೂರ್ನಿಯಲ್ಲಿ ರನ್ನರ್-ಅಪ್ ಆಗಿದ್ದ ಹಾಲೆಪ್ ಈ ಬಾರಿ ಉತ್ತಮ ಆರಂಭ ಪಡೆದಿದ್ದರೂ ಆ ಬಳಿಕ ಆಡಿದ್ದ ಎರಡು ಪಂದ್ಯಗಳಲ್ಲಿ ನೇರ ಸೆಟ್‌ಗಳಿಂದ ಸೋತಿದ್ದರು.
ಮೊದಲೆರಡು ರೆಡ್ ಗ್ರೂಪ್ ಪಂದ್ಯಗಳನ್ನು ಸೋತಿರುವ ಸಿಬುಲ್ಕೋವಾ ಮುಂದಿನ ಸುತ್ತಿಗೆ ತಲುಪುವುದು ಇನ್ನೂ ಖಚಿತವಾಗಿಲ್ಲ. ರಶ್ಯದ ಸ್ವೆತ್ಲಾನಾ ಕುಝ್ನೆಸೋವಾ ಈಗಾಗಲೇ ವೈಟ್ ಗ್ರೂಪ್‌ನಿಂದ ನಾಕೌಟ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಹಾಲಿ ಚಾಂಪಿಯನ್ ಅಗ್ನೆಸ್ಕಾ ರಾಂಡ್ವಾಂಸ್ಕಾ ಶುಕ್ರವಾರ ಯುಎಸ್ ಓಪನ್ ಫೈನಲಿಸ್ಟ್ ಕ್ಯಾರೊಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಸೆಮಿಫೈನಲಿಸ್ಟ್ ಯಾರೆಂದು ಗೊತ್ತಾಗಲಿದೆ.







