ಬೆಲ್ಜಿಯಂಗೆ ಶರಣಾದ ಭಾರತ
ಆಹ್ವಾನಿತ ಹಾಕಿ ಟೂರ್ನಮೆಂಟ್
ವೆಲೆನ್ಸಿಯ, ಅ.27: ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್‌ನ ತನ್ನ 2ನೆ ಪಂದ್ಯದಲ್ಲಿ ಭಾರತದ ಜೂನಿಯರ್ ಪುರುಷರ ಹಾಕಿ ತಂಡ ಬೆಲ್ಜಿಯಂನ ವಿರುದ್ಧ 2-4 ಗೋಲುಗಳ ಅಂತರದಿಂದ ಸೋತಿದೆ.
ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಜರ್ಮನಿ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿತ್ತು.
ಬುಧವಾರ ರಾತ್ರಿ ನಡೆದ 2ನೆ ಪಂದ್ಯದಲ್ಲಿ ಬೆಲ್ಜಿಯಂ ಆರಂಭದಲ್ಲೇ ಮೇಲುಗೈ ಸಾಧಿಸಿತು. ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ವಿಕ್ಟರ್ ವೆಗ್ನೆಝ್ ತನ್ನ ತಂಡಕ್ಕೆ ಬೇಗನೆ ಮುನ್ನಡೆ ಒದಗಿಸಿಕೊಟ್ಟರು.
ನಾಲ್ಕನೆ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಬೆಲ್ಜಿಯಂನ ವ್ಯಾನ್ ಡೊರೆನ್ ಭಾರತಕ್ಕೆ ಗೋಲು ನಿರಾಕರಿಸಿದರು. ಭಾರತ 11ನೆ ನಿಮಿಷದಲ್ಲಿ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅವಕಾಶ ಗಿಟ್ಟಿಸಿಕೊಂಡಿತು. ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿ 1-1 ರಿಂದ ಡ್ರಾ ಗೊಳಿಸಿದರು.
ದ್ವಿತೀಯಾರ್ಧದಲ್ಲಿ ಕೇವಲ 8 ನಿಮಿಷಗಳ ಅಂತರದಲ್ಲಿ ಮೂರು ಗೋಲುಗಳನ್ನು ಬಾರಿಸಿದ ಬೆಲ್ಜಿಯಂ ಪಂದ್ಯದ ದಿಕ್ಕನ್ನು ಬದಲಿಸಿತು. ಫ್ಯಾಬ್ರಿಸ್ ವ್ಯಾನ್ ಬಾಕ್ರಿಜಿಕ್(49ನೆ ನಿಮಿಷ), ಆ್ಯಂಟನಿ ಕಿನಾ(56ನೆ ನಿ.) ಹಾಗೂ ಗ್ರೆಗೊರಿ ಸ್ಟಾಕ್‌ಬ್ರೊಕ್(57ನೆ ನಿ.) ತಲಾ ಒಂದು ಗೋಲು ಬಾರಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿಕೊಟ್ಟರು.
ಅಜಯ್ ಯಾದವ್ 60ನೆ ನಿಮಿಷದಲ್ಲಿ ಭಾರತದ ಪರ ಎರಡನೆ ಗೋಲು ಬಾರಿಸಿದರು. ಆದರೆ, ಬೆಲ್ಜಿಯಂ 2 ಗೋಲುಗಳ ಮುನ್ನಡೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಯಿತು.
ಭಾರತ ತನ್ನ ಮೂರನೆ ಪಂದ್ಯದಲ್ಲಿ ಆತಿಥೇಯ ಸ್ಪೇನ್ ತಂಡವನ್ನು ಎದುರಿಸಲಿದೆ.







