ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ತಡೆಯಾಜ್ಞೆ: ಚೆನ್ನೈ ಹಸಿರುಪೀಠದಿಂದ ವಿಚಾರಣೆ ನ.9ಕ್ಕೆ ಮುಂದೂಡಿಕೆ
ಉಡುಪಿ, ಅ.27: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ವಿಧಿಸಿರುವ ತಡೆಯಾಜ್ಞೆಗೆ ಸಂಬಂಧಿಸಿದಂತೆ ಚೆನ್ನೈನ ಹಸಿರುಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ನ.9ಕ್ಕೆ ಮುಂದೂಡಿದೆ. ಇಂದು ನಡೆದ ವಿಚಾರಣೆಯ ವೇಳೆ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.
ಮರಳುಗಾರಿಕೆಯಿಂದ ತಾಲೂಕಿನ ಬೈಕಾಡಿ, ಹಾರಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಜನತೆಗೆ ಭಾರೀ ಸಮಸ್ಯೆ ಉಂಟಾಗಿತ್ತು. ಇದರಿಂದ ಬೇಸತ್ತು ಬೈಕಾಡಿಯ ಉದಯ ಸುವರ್ಣ ಎಂಬವರು ಚೆನ್ನೈಯ ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮೇ 17 ರಂದು ಹಸಿರು ಪೀಠ ಮರಳುಗಾರಿಕೆಗೆ ತಡೆಯಾಜ್ಞೆ ವಿಧಿಸಿತ್ತು. ಇದರಿಂದ ಜಿಲ್ಲೆಯಲ್ಲಿ ಮರಳಿನ ತೀವ್ರ ಸಮಸ್ಯೆ ಎದುರಾಗಿದೆ.
ಇಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪರವಾಗಿ ವಾದ ಮಂಡಿಸಲಾಗಿದ್ದು, ಅವರು ಇನ್ನೂ ಎರಡು ದಿನಗಳ ಕಾಲಾವಕಾಶ ಕೇಳಿದ್ದರಿಂದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನ.9ಕ್ಕೆ ನಿಗದಿಪಡಿಸಿತು. ವಾದ ಮಂಡನೆಯಾದ ಬಳಿಕ ಅಂದೇ ತೀರ್ಪು ಹೊರಬೀಳುವ ಸಾಧ್ಯತೆಯಿದೆ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಕೋದಂಡರಾಮಯ್ಯ ತಿಳಿಸಿದ್ದಾರೆ.
ಹಸಿರು ಪೀಠದಲ್ಲಿ ತಡೆಯಾಜ್ಞೆಯ ವಿರುದ್ಧ ಗುರುವಾರ ಜಿಲ್ಲೆಯ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ಪರವಾಗಿ ಕುಂದಾಪುರದ ಶಿವರಾಜ್ ಹೆಗ್ಡೆ ಹಾಗೂ ತಮಿಳುನಾಡಿನ ಮಾಜಿ ಅಡ್ವೊಕೇಟ್ ಜನರಲ್ ಅರುಣ್ ಪಾಂಡ್ಯನ್ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಂತಿಮ ಸರಕಾರಿ ವಾದಕ್ಕೆ ನ.9ರಂದು ದಿನ ನಿಗದಿಪಡಿಸಿದರು. ಅಂದಿನ ವಿಚಾರಣೆ ವೇಳೆ ತಡೆಯಾಜ್ಞೆ ತೆರವುಗೊಳ್ಳುವ ವಿಶ್ವಾಸವನ್ನು ಹೊಯ್ಗೆ ದೋಣಿ ಕಾರ್ಮಿಕರ ಸಂಘದ ಪರ ವಕೀಲರು ವ್ಯಕ್ತಪಡಿಸಿದ್ದಾರೆ. ತಜ್ಞರೊಂದಿಗೆ ಚರ್ಚೆ: ಈ ನಡುವೆ ಮರಳುಗಾರಿಕೆಗೆ ಸಂಬಂಧಿಸಿ ಅಧ್ಯಯನ ನಡೆಸಿ ವರದಿ ತಯಾರಿಸಿರುವ ಸುರತ್ಕಲ್ ಎನ್‌ಐಟಿಕೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಜಿ. ಮಯ್ಯ ಚೆನ್ನೈನಲ್ಲಿ ಅರುಣ್ ಪಾಂಡ್ಯನ್‌ರೊಂದಿಗೆ ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ವಿನಿ ಮಯ ಮಾಡಿಕೊಂಡಿದ್ದಾರೆ. ಕರಾವಳಿಯ ನದಿ ಗಳಲ್ಲಿ ಸೃಷ್ಟಿಯಾಗುವ ನೈಸರ್ಗಿಕ ಮರಳು ದಿಬ್ಬಗಳು, ಅವುಗಳನ್ನು ತೆಗೆಯದಿದ್ದರೆ ಪರಿಸರ, ದೋಣಿ ಸಂಚಾರಕ್ಕೆ ಆಗುವ ತೊಂದರೆಗಳು ಮತ್ತಿತರ ವಿಚಾರ ಗಳ ಕುರಿತು ಎಸ್.ಜಿ.ಮಯ್ಯರವರು ಪಾಂಡ್ಯನ್ ರಿಗೆ ವಿವರಿಸಿದರು ಎಂದು ತಿಳಿದುಬಂದಿದೆ.





