ಭಾರತದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ಅಘೋಷಿತ ಬಹಿಷ್ಕಾರ
ಭಾರತದಲ್ಲಿನ ಚೀನೀ ಹೂಡಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ: ಚೀನಾ ಎಚ್ಚರಿಕೆ
_-_IMG_1104.jpg)
ಬೀಜಿಂಗ್, ಅ. 27: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ಭಾರತದಲ್ಲಿ ಅಭಿಯಾನ ನಡೆಯುತ್ತಿರುವಂತೆಯೇ, ಇಂಥ ಯಾವುದೇ ಕ್ರಮಗಳು ಭಾರತಕ್ಕೆ ಹರಿಯುವ ಚೀನೀ ಹೂಡಿಕೆಗಳ ಮೇಲೆ ಹಾಗೂ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಚೀನಾ ಗುರುವಾರ ಎಚ್ಚರಿಸಿದೆ.
ಅದೇ ವೇಳೆ, ಇಂಥ ಯಾವುದೇ ಬಹಿಷ್ಕಾರವು ತನ್ನ ರಫ್ತುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದಿದೆ. ‘‘ಆದರೆ, ಸರಿಯಾದ ಪರ್ಯಾಯ ವ್ಯವಸ್ಥೆಯಿಲ್ಲದೆ ಹೇರಲಾಗುತ್ತಿರುವ ಬಹಿಷ್ಕಾರದಿಂದ ಹೆಚ್ಚಿನ ನಷ್ಟ ಅನುಭವಿಸುವವರು ಭಾರತೀಯ ವ್ಯಾಪಾರಿಗಳು ಮತ್ತು ಗ್ರಾಹಕರು’’ ಎಂದು ಅದು ಅಭಿಪ್ರಾಯಪಟ್ಟಿದೆ.
ಚೀನಾ ಜಗತ್ತಿನ ಅತಿ ದೊಡ್ಡ ವಸ್ತುಗಳ ಮಾರಾಟ ದೇಶವಾಗಿದೆ ಹಾಗೂ 2015ರಲ್ಲಿ ಅದರ ರಫ್ತು 2276.5 ಬಿಲಿಯ ಡಾಲರ್ ಆಗಿತ್ತು ಎಂದು ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಚೀನಾ ರಾಯಭಾರ ಕಚೇರಿ ಹೇಳಿದೆ.
‘‘ಚೀನಾ ತನ್ನ ಒಟ್ಟು ರಫ್ತಿನ 2 ಶೇಕಡ ಮಾತ್ರ ಭಾರತಕ್ಕೆ ರಫ್ತು ಮಾಡುತ್ತದೆ. ಹಾಗಾಗಿ, ಭಾರತದಲ್ಲಿ ಚೀನೀ ಉತ್ಪನ್ನಗಳ ಬಹಿಷ್ಕಾರದಿಂದ ಚೀನಾದ ರಫ್ತುಗಳ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ’’ ಎಂದಿದೆ.
‘‘ಬಹಿಷ್ಕಾರವು ಭಾರತದಲ್ಲಿನ ಚೀನಾ ಕಂಪೆನಿಗಳ ಹೂಡಿಕೆ ಮತ್ತು ದ್ವಿಪಕ್ಷೀಯ ಸಹಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಚೀನಾ ಹೆಚ್ಚು ಕಳವಳ ಹೊಂದಿದೆ. ಇದರ ಬಗ್ಗೆ ಚೀನಾ ಮತ್ತು ಭಾರತದ ಜನರು ಗಮನ ಹರಿಸುತ್ತಿಲ್ಲ’’ ಎಂದು ಚೀನಾ ರಾಯಭಾರ ಕಚೇರಿ ಹೇಳಿದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಈ ಹಂತದಲ್ಲಿ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವುದನ್ನು ಪ್ರತಿಭಟಿಸಿ ಭಾರತದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರ ಅಭಿಯಾನ ನಡೆಯುತ್ತಿದೆ.





