2017ರ ಜೂನ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ
ಬೆಂಗಳೂರು, ಅ. 27: ‘ವಿಶ್ವ ಕನ್ನಡ ಸಮ್ಮೇಳನ’ವನ್ನು 2017ರ ಜೂನ್‌ನಲ್ಲಿ ಹೈದರಾಬಾದ್ ಕರ್ನಾಟಕ ಅಥವಾ ಬೆಂಗಳೂರು ಕಂದಾಯ ವಿಭಾಗದಲ್ಲಿ ಆಯೋಜಿಸಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಅವರು, 2017ರ ಜೂನ್‌ನಲ್ಲಿ ಮೂರು ದಿನಗಳ ಕಾಲ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು, ಬಜೆಟ್‌ನಲ್ಲಿ 30 ಕೋಟಿ ರೂ.ಮೀಸಲಿರಿಸಲಾಗಿದೆ ಎಂದರು.
ಹೈ.ಕ. ಅಥವಾ ಬೆಂಗಳೂರು ಕಂದಾಯ ವಿಭಾಗದಲ್ಲಿ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಸಿದ್ದು, ದಾವಣಗೆರೆ ಅಥವಾ ಬಳ್ಳಾರಿಯಲ್ಲಿ ಸಮ್ಮೇಳನ ಏರ್ಪಡಿಸುವ ಸಂಬಂಧ ಚರ್ಚೆ ನಡೆದಿದ್ದು, ಸ್ಥಳ ನಿಗದಿ ಇನ್ನೂ ಅಂತಿಮವಾಗಿಲ್ಲ ಎಂದು ಅವರು ಹೇಳಿದರು. ಸಮ್ಮೇಳನ ಯಶಸ್ವಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲು ತೀರ್ಮಾನಿಸಿದ್ದು, ಸಮ್ಮೇಳನ ಏರ್ಪಡಿಸುವ ಸಂಬಂಧ ಸಾಹಿತಿಗಳು, ಜನಪ್ರತಿನಿಗಳು, ಕಲಾವಿದರನ್ನು ಆಹ್ವಾನಿಸಿ ಸಮಾಲೋಚನೆ ಸಭೆ ನಡೆಸಿ ಸಿಎಂ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.ರ ಬೆಳಗಾವಿ ನಡೆಸಿದ ವಿಶ್ವ ಕನ್ನಡ ಸಮ್ಮೇಳನಕ್ಕೆ 35ಕೋಟಿ ರೂ. ವೆಚ್ಚ ಆಗಿತ್ತು. 2017ಕ್ಕೆ ನಡೆಸಲು ಉದ್ದೇಶಿಸಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ 35 ಕೋಟಿ ರೂ.ವೆಚ್ಚವಾಗಲಿದ್ದು, ಅದನ್ನು ಭರಿಸಲು ಸಿಎಂ ಸಮ್ಮತಿಸಿದ್ದಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಕಾರಿಗಳು ಪಾಲ್ಗೊಂಡಿದ್ದರು.