ಕಾರ್ಯಕ್ರಮ ತಡೆಯಲು ಮಹಿಳೆಯರ ಮೇಲೆ ದಾಳಿ ಮಾಡಿದ ಎಬಿವಿಪಿ : ಆರೋಪ

ಹೊಸದಿಲ್ಲಿ, ಅ.28: ಎಡ ಪಕ್ಷೀಯ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದಕ್ಕೆ ಅಡ್ಡಿಯುಂಟು ಮಾಡಿದ ಎಬಿವಿಪಿ ಕಾರ್ಯಕರ್ತರು ಅಸೋಸಿಯೇಶನ್ನ ಕೆಲ ಮಹಿಳಾ ಸದಸ್ಯರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ, ಎಬಿವಿಪಿಯ ಅಮಿತ್ ತನ್ವರ್ ನಿರಾಕರಿಸಿದ್ದಾರೆ.
ಆದರೆ ಸ್ಟೂಡೆಂಟ್ಸ್ ಅಸೋಸಿಯೇಶನ್ ಕಾರ್ಯಕರ್ತ ಸನ್ನಿ ಕುಮಾರ್ ಪ್ರಕಾರ ಎಬಿವಿಪಿ ಸದಸ್ಯರು ಸಭೆ ನಡೆದ ಸ್ಥಳಕ್ಕೆ ನುಗ್ಗಿ ಅಲ್ಲಿದ್ದ ಪೋಸ್ಟರುಗಳನ್ನು ಹಾಗೂ ಕರಪತ್ರಗಳನ್ನು ಹರಿದು ಹಾಕಿದ್ದರಲ್ಲದೆ, ಅಸೋಸಿಯೇಶನ್ ನ ದಿಲ್ಲಿ ವಿಶ್ವವಿದ್ಯಾಲಯ ಘಟಕದ ಅಧ್ಯಕ್ಷ ಕವಲ್ ಪ್ರೀತ್ ಕೌರ್ಮೇಲೆ ಹಲ್ಲೆ ನಡೆಸಿ ಭಾಷಣ ನೀಡುತ್ತಿದ್ದ ಕವಿತಾ ಕೃಷ್ಣನ್ ಅವರನ್ನೂ ತಡೆದರು. ನಂತರ ಸಭೆಯನ್ನು ಪೊಲೀಸರು ರದ್ದುಗೊಳಿಸುವಂತೆ ಹೇಳಿದರು ಎಂದು ಕುಮಾರ್ ಹೇಳಿದ್ದಾರೆ.
‘‘ಐಡಿಯಾ ಆಫ್ ಯುನಿವರ್ಸಿಟಿ’’ ಎಂದು ಹೆಸರಿಸಲಾದ ಕಾರ್ಯಕ್ರಮವನ್ನು ವಿವಿಧ ಕ್ಯಾಂಪಸ್ಸುಗಳಲ್ಲಿ ನಡೆಯುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಪರವಾಗಿ ನಡೆಸಲಾಗುತ್ತಿರುವ ಹೋರಾಟದ ಭಾಗವಾಗಿ ಹಾಗೂ ಜೆಎನ್‌ಯುವಿನ ನಾಪತ್ತೆಯಾಗಿರುವ ವಿದ್ಯಾರ್ಥಿ ನಜೀಬ್ ಅಹಮದ್ ಅವರಿಗೆ ಬೆಂಬಲಾರ್ಥ ಆಯೋಜಿಸಲಾಗಿತ್ತು.
ಆದರೆ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆಯೆಂಬ ಸುದ್ದಿಯನ್ನು ಪೊಲೀಸರು ನಿರಾಕರಿಸಿದ್ದಾರೆ.
ಎಬಿವಿಪಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಸಂದರ್ಭದ ವೀಡಿಯೋ ತುಣುಕನ್ನು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ಕಾರ್ಯಕರ್ತೆ ಕವಿತಾ ಕೃಷ್ಣನ್ ಪೋಸ್ಟ್ ಮಾಡಿದ್ದಾರೆ. ಈ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ದಿಲ್ಲಿ ಮೂಲದ ಪತ್ರಕರ್ತ ಸಯ್ಯದ್ ಹಸನ್ ಖಾಝಿಮ್ ಕೂಡ ತಮ್ಮ ಫೇಸ್ ಬುಕ್ ಪುಟದಲ್ಲಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.





