ರಸ್ತೆ ದುರಸ್ತಿಯಲ್ಲಿ ನಿರ್ಲಕ್ಷ: ವಾರದೊಳಗೆ ವರದಿಗೆ ಮೇಯರ್ ಆದೇಶ
.gif)
ಮಂಗಳೂರು, ಅ.28: ಮಂಗಳೂರು ದಸರಾ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ಕ್ಷೇತ್ರಗಳಾದ ಮಂಗಳಾದೇವಿ, ಮಾರಿಯಮ್ಮ ಗುಡಿ ಹಾಗೂ ಕುದ್ರೋಳಿ ಬಳಿ ರಥಯಾತ್ರೆಗೆ ಸಾಗುವ ರಸ್ತೆಗಳ ದುರಸ್ತಿಯನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಮೂವರನ್ನೊಳಗೊಂಡ ಸದನ ಸಮಿತಿ ರಚನೆ ಮಾಡಿ ಒಂದು ವಾರದೊಳಗೆ ವರದಿ ನೀಡುವಂತೆ ಮೇಯರ್ ಹರಿನಾಥ್ ಆದೇಶಿಸಿದ್ದಾರೆ.
ಮನಪಾ ಸಾಮಾನ್ಯ ಸಭೆಯಲ್ಲಿಂದು ಈ ಆದೇಶ ನೀಡಿರುವ ಅವರು, ದುರಸ್ತಿ ಹಾಗೂ ಡಾಮರೀಕರಣಕ್ಕೆ ಸೂಚನೆ ನೀಡಲಾಗಿದ್ದರೂ ನಿರ್ಲಕ್ಷ ವಹಿಸಲಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ನಿರ್ದೇಶಿಸಿದರು.
ಸಭೆಯ ಆರಂಭದಲ್ಲೇ ಶಾಸಕ ಜೆ.ಆರ್ ಲೋಬೊ ಮಾತನಾಡಿ, ಮಂಗಳೂರು ದಸರಾ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ದೇವಸ್ಥಾನಗಳಲ್ಲಿ ರಥಯಾತ್ರೆ ನಡೆಯುತ್ತದೆ. ಲಕ್ಷಾಂತರ ಭಕ್ತರು ನಗರದಲ್ಲಿ ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ತೇಪೆ, ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕಾಗಿತ್ತು. ಆದರೆ ಅದನ್ನು ಮಾಡದೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಇದು ಮನಪಾದ ಮರ್ಯಾದೆಯ ಪ್ರಶ್ನೆ. ಹಾಗಾಗಿ ಈ ಬಗ್ಗೆ ಸದನ ಸಮಿತಿ ರಚನೆ ಮಾಡಿ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷ ಆಗದಂತೆ ಸಂದೇಶವನ್ನು ಮನಪಾ ನೀಡಬೇಕು ಎಂದು ಅಭಿಪ್ರಾಯಿಸಿದರು.
ಇದಕ್ಕೆ ಪೂರಕವಾಗಿ ವಿಪಕ್ಷ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸದಸ್ಯರಾದ ರಾಜೇಂದ್ರ ಕುಮಾರ್, ನವೀನ್ ಡಿಸೋಜ, ಶಶಿಧರ ಹೆಗ್ಡೆ, ದಯಾನಂದ ಶೆಟ್ಟಿ, ರಮೀಝಾ ಬಾನು, ರತಿಕಲಾ, ಅಬ್ದುಲ್ ರವೂಫ್ ಮೊದಲಾದವರು ಅಧಿಕಾರಿಗಳ ನಿರ್ಲಕ್ಷವನ್ನು ಖಂಡಿಸಿದರು.
ಮೇಯರ್ ಹರಿನಾಥ್ ಈ ಸಂದರ್ಭ ಪ್ರತಿಕ್ರಿಯಿಸಿ, ದಸರಾಕ್ಕೆ ಒಂದು ತಿಂಗಳ ಮುಂಚಿತವಗಿಯೇ ನಗರದ ಎಲ್ಲಾ ರಸ್ತೆಗಳ ಪ್ಯಾಚ್‌ವರ್ಕ್ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಇಂಜಿನಿಯರ್‌ಗಳು ಅಸಡ್ಡೆ ತೋರಿದ್ದಾರೆ. ಈ ಬಗ್ಗೆ ಸದಸ್ಯರಿಂದ ಆಕ್ಷೇಪ ಬಂದಿದ್ದಾಗ ಮತ್ತೆ ಅವರಿಗೆ ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲದ ಕಾರಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರು. ಹಾಗಾಗಿ ಮನಪಾದ ಅಧೀಕ್ಷಕ ಅಭಿಯಂತರ ಶ್ರೀನಿವಾಸ್, ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಹಾಗೂ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನೊಳಗೊಂಡ ಸದನ ಸಮಿತಿ ರಚನೆ ಮಾಡಿ ಒಂದು ವಾರದೊಳಗೆ ವರದಿ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆದೇಶಿಸಿದರು.
ಬಿಳಿ ಆನೆಯಂತೆ ಡಂಪಿಂಗ್ ಯಾರ್ಡ್ ಸಾಕುತ್ತಿದ್ದೇವೆ!
ಮಹಾನಗರ ಪಾಲಿಕೆ ವತಿಯಿಂದ ಪರವಾನಿಗೆ ರಹಿತ ಉದ್ದಿಮೆಗಳು ಹಾಗೂ ಪರವಾನಿಗೆ ನವೀಕರಣಕ್ಕಾಗಿ ದಾಳಿಗಳು ನಡೆಯುತ್ತಿದೆ. ಈ ವರ್ಷ ದಾಳಿ ಮಾಡಿ 22,000 ಪರವಾನಿಗೆಗಳು ನವೀಕರಣಗೊಂಡಿವೆ. ಆದರೆ ಕಳೆದ ವರ್ಷ ದಾಳಿ ನಡೆಸದೆಯೇ 27,000 ಉದ್ದಿಮೆಗಳು ನವೀಕರಣಗೊಂಡಿತ್ತು. ದಾಳಿ ನಡೆಸುವುದಿದ್ದರೆ ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ಗೆ ದಾಳಿಯಾಗಬೇಕು. ಅಲ್ಲಿ ಎಷ್ಟು ಗೊಬ್ಬರ ಉತ್ಪತ್ತಿಯಾಗಿದೆ, ಎಷ್ಟು ಮಾರಾಟ ಆಗಿದೆ ಎಂಬ ಬಗ್ಗೆ ತನಿಖೆ ಆಗಬೇಕು. ಬಿಳಿ ಆನೆ ಸಾಕಿದಂತೆ ಡಂಪಿಂಗ್ ಯಾರ್ಡ್ ಸಾಕುತ್ತಿದ್ದೇವೆ ಎಂದು ಸದಸ್ಯ ರಾಧಾಕೃಷ್ಣ ಅವರು ಆರೋಪಿಸಿದರು. ಈ ಆರೋಪಕ್ಕೆ ವಿಪಕ್ಷ ಹಾಗೂ ಆಡಳಿತ ಸದಸ್ಯರೂ ದನಿಗೂಡಿಸಿದರು. ಸದಸ್ಯರು ಮಾಡಿರುವ ಆರೋಪದ ಬಗ್ಗೆ ಲಿಖಿತ ದಾಖಲೆಗಳನ್ನು ಒದಗಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಹರಿನಾಥ್ ಉತ್ತರಿಸಿದರು. ಈ ಸಂದರ್ಭ ಸದಸ್ಯ ಅಝೀಝ್ ಕುದ್ರೋಳಿ ಮಾತನಾಡಿ, ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಅವ್ಯವಹಾರದ ಬಗ್ಗೆ ದಾಖಲೆ ಸಹಿತ ದೂರು ನೀಡಿದ್ದರೂ ಏನು ಕ್ರಮವಾಗಿದೆ ಎಂದು ಆಗ್ರಹಿಸಿದರು. ಈ ಬಗ್ಗೆ ಕೆಲ ಹೊತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು, ಸಿಬಿಐ ತನಿಖೆಯಾಗಬೇಕು ಎಂಬ ಆಗ್ರಹವೂ ಸದಸ್ಯರಿಂದ ವ್ಯಕ್ತವಾಯಿತು.
ಸದಸ್ಯರ ವಿವಿಧ ಆಕ್ಷೇಪಗಳ ಕುರಿತಂತೆ ಪ್ರತಿಕ್ರಿಯಿಸುವ ವೇಳೆ ಈ ಬಗ್ಗೆ ಉತ್ತರಿಸಿದ ಆಯುಕ್ತ ಮುಹಮ್ಮದ್ ನಝೀರ್, ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ 3 ತಿಂಗಳಲ್ಲಿ ಮೂರು ಬಾರಿ ಭೇಟಿ ನೀಡಿದ್ದೇನೆ. ಈ ರೀತಿಯ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ನಡುವೆ ಸ್ವಚ್ಛ ನಗರದ ಪರಿವೀಕ್ಷಣೆಗಾಗಿ ಕೇಂದ್ರ ಸರಕಾರ ತಂಡವೂ ಅಲ್ಲಿಗೆ ಭೇಟಿ ನೀಡಿದೆ. ನೀತಿ ಆಯೋಗದ ನಿರ್ದೇಶಕರೂ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ. ಸಭೆಯಲ್ಲಿ ಪ್ರಸ್ತಾಪಗೊಂಡ ನಿರ್ದಿಷ್ಟ ವಿಷಯದ ಬಗ್ಗೆ ದಾಖಲೆ ನೀಡಿದರೆ ತನಿಖೆ ನಡೆಸುವುದಾಗಿ ಹೇಳಿದರು.
ಸಭೆಯಲ್ಲಿ ಉಪ ಮೇಯರ್ ಸುಮಿತ್ರಾ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲೋಟ್ ಪಿಂಟೋ, ಅಪ್ಪಿಲತಾ, ಕವಿತಾ ಸನಿಲ್ ಉಪಸ್ಥಿತರಿದ್ದರು.







