ವಿರಾಟ್ ಕೊಹ್ಲಿಯಿಂದ 3 ಕೋಟಿಯ ಕಾರು ಖರೀದಿಸಿದ್ದ ಮಹಾವಂಚಕ!

ಥಾಣೆ,ಅ.28: ಇಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಕುರಿತು ತನಿಖೆಯ ಜೊತೆಗೆ ಈ ವಂಚನೆಯ ರೂವಾರಿ ಎನ್ನಲಾಗಿರುವ ಸಾಗರ್ ಥಕ್ಕರ್ ಅಲಿಯಾಸ್ ಶ್ಯಾಗಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಥಾಣೆ ಪೊಲೀಸರು, ಆತ ತನ್ನ ಗರ್ಲ್‌ಫ್ರೆಂಡ್‌ಗೆ ಉಡುಗೊರೆಯಾಗಿ ನೀಡಿದ್ದ ಮೂರು ಕೋ.ರೂ.ವೌಲ್ಯದ ಆಡಿ ಆರ್-8 ಕಾರನ್ನು ಹಾಲಿ ಭಾರತೀಯ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯಿಂದ ಖರೀದಿಸಿದ್ದ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಕೊಹ್ಲಿಗೆ ಥಕ್ಕರ್‌ನ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ ಮತ್ತು ಅವರು ಈ ಹಗರಣದೊಂದಿಗ ಯಾವುದೇ ಸಂಬಂಧ ಹೊಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಥಕ್ಕರ್ ಅಕ್ರಮ ಗಳಿಕೆಯ ಹಣದಿಂದ ಖರೀದಿಸಿದ್ದ ಆಡಿ ಕಾರನ್ನು ಥಾಣೆ ಪೊಲೀಸರು ಅಹ್ಮದಾಬಾದ್‌ನಲ್ಲಿ ವಶಪಡಿಸಿಕೊಂಡಿರುವುದನ್ನು ಡಿಸಿಪಿ ಪರಾಗ್ ಮಾನೆ ದೃಢಪಡಿಸಿದ್ದಾರೆ.ಥಕ್ಕರ್ ಪ್ರಸಕ್ತ ದುಬೈನಲ್ಲಿ ತನ್ನ ಸೋದರಿ ರೀಮಾ ಜೊತೆ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಕಾಲ್ ಸೆಂಟರ್ ಜಾಲದಲ್ಲಿ ರೀಮಾ ಕೂಡ ಭಾಗಿ ಯಾಗಿದ್ದಳೆಂಬ ಶಂಕೆಯಿದೆ.
ಅಲ್ಲಿ ಅವರ ಕೆಲವು ಸಂಬಂಧಿಗಳು ಇದ್ದಾರೆ ಎಂದು ನಾವು ಶಂಕಿಸಿದ್ದೇವೆ. ಅವರನ್ನು ದೇಶಕ್ಕೆ ವಾಪಸ್ ಕರೆತರುವ ಪ್ರಯತ್ನ ಜಾರಿಯಲ್ಲಿದೆ ಎಂದು ಮಾನೆ ತಿಳಿಸಿದರು.







