ಬ್ರಿಸ್ಬೇನ್: ಭಾರತ ಮೂಲದ ಬಸ್ ಚಾಲಕನ ಜೀವಂತ ದಹನ

ಮೆಲ್ಬರ್ನ್, ಅ. 28: ಆಸ್ಟ್ರೇಲಿಯದ ಬ್ರಿಸ್ಬೇನ್‌ನಲ್ಲಿ ಭಾರತ ಮೂಲದ ಬಸ್ ಚಾಲಕರೊಬ್ಬರನ್ನು ದುಷ್ಕರ್ಮಿಯೊಬ್ಬ ಪ್ರಯಾಣಿಕರ ಎದುರಲ್ಲೇ ಬೆಂಕಿ ಹಚ್ಚಿ ಜೀವಂತ ಸುಟ್ಟ ಭೀಕರ ಘಟನೆಯೊಂದು ವರದಿಯಾಗಿದೆ.
ಬ್ರಿಸ್ಬೇನ್ ಸಿಟಿ ಕೌನ್ಸಿಲ್‌ನಲ್ಲಿ ಬಸ್ ಚಾಲಕರಾಗಿರುವ 29 ವರ್ಷದ ಮನ್‌ಮೀತ್ ಅಲಿಶರ್ ಮೇಲೆ ಅವರು ಬಸ್ ಚಲಾಯಿಸುತ್ತಿದ್ದಾಗ ವ್ಯಕ್ತಿಯೊಬ್ಬ ದಹನಶೀಲ ವಸ್ತುವೊಂದನ್ನು ಎಸೆದನು. ಆಗ ಬೆಂಕಿ ಹತ್ತಿಕೊಂಡಿತು.
ಪಂಜಾಬಿ ಸಮುದಾಯದಲ್ಲಿ ಖ್ಯಾತ ಗಾಯಕರೆಂದು ಗುರುತಿಸಿಕೊಂಡಿದ್ದ ಅಲಿಶರ್ ಸ್ಥಳದಲ್ಲೇ ಮೃತಪಟ್ಟರು. ಆಗ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಹಿಂದಿನ ಬಾಗಿಲಿನ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ತಿಳಿಸಿದರು.
ಹೊಗೆ ಸೇವಿಸಿ ಅಸ್ವಸ್ಥಗೊಂಡಿದ್ದ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಗೆ ಸಂಬಂಧಿಸಿ 48 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಳಗ್ಗೆ 9 ಗಂಟೆಯ ವೇಳೆ, ಬೋಡಿಸರ್ಟ್ ರಸ್ತೆಯಲ್ಲಿ ಪ್ರಯಾಣಿಕರು ಬಸ್ ಏರುತ್ತಿದ್ದಾಗ ವ್ಯಕ್ತಿಯೊಬ್ಬ ಚಾಲಕನ ಮೇಲೆ ವಸ್ತುವೊಂದನ್ನು ಎಸೆದನು ಹಾಗೂ ಆಗ ಬೆಂಕಿ ಹತ್ತಿಕೊಂಡಿತು ಎಂದು ಪೊಲೀಸರು ನುಡಿದರು.
ಮೃತರ ಗೌರವಾರ್ಥ ಶನಿವಾರ ಬ್ರಿಸ್ಬೇನ್‌ನಲ್ಲಿ ಧ್ವಜಗಳನ್ನು ಅರ್ಧಕ್ಕೆ ಹಾರಿಸಲಾಯಿತು.







