ಅಬ್‌ಕಿಬಾರ್ ಟ್ರಂಪ್ ಸರಕಾರ್: ಟ್ರಂಪ್‌ರಿಂದ ಹೀಗೊಂದು ಪ್ರಚಾರ !
.jpg)
ವಾಷಿಂಗ್ಟನ್, ಅಕ್ಟೋಬರ್ 28: ಅಬ್ ಕಿಬಾರ್ ಟ್ರಂಪ್ ಸರಕಾರ್(ಈ ಬಾರಿ ಟ್ರಂಪ್ ಸರಕಾರ) ಎಂಬ ಘೋಷಣೆಯೊಂದಿಗೆ ಟ್ರಂಪ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 2014ರಲ್ಲಿ ಭಾರತದ ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರದ ಘೋಷಣೆಯಾದ ಅಬ್‌ಕಿಬಾರ್ ಮೋದಿ ಸರಕಾರ್‌ನಿಂದ ಪ್ರೇರಿತರಾಗಿ ಅಮೆರಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್‌ಟ್ರಂಪ್ ಹೀಗೊಂದು ಪ್ರಚಾರಶೈಲಿಯನ್ನು ನೆಚ್ಚಿಕೊಂಡಿದ್ದಾರೆಂದು ವರದಿಯಾಗಿದೆ.
ಇಂಡೋ ಅಮೆರಿಕನ್ ಪ್ರಜೆಗಳನ್ನು ಲಕ್ಷ್ಯವಿಟ್ಟು ಈ ಘೋಷಣೆಯೊಂದಿಗೆ ಟೆಲಿವಿಷನ್ ಜಾಹೀರಾತಿನಲ್ಲಿ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಪ್ರತ್ಯಕ್ಷರಾಗಿದ್ದಾರೆ. ಇಂಡಿಯನ್ ಹಿಂದೂ ಸಮುದಾಯವನ್ನು ಉದ್ದೇಶಿಸಿ ಮಾತಾಡಿದ ಟ್ರಂಪ್ 29ಸೆಕೆಂಡ್‌ನ ಜಾಹೀರಾತಿನಲ್ಲಿ ಭಾರತದ ಪ್ರಧಾನಿಯ ಭಾವಚಿತ್ರವನ್ನೂ ಬಳಸಿಕೊಂಡಿದ್ದಾರೆ.
ಅಮೆರಿಕದ ಭಾರತೀಯ ವಂಶೀಯರಲ್ಲಿ ಹೆಚ್ಚಿನವರು ಡೆಮಕ್ರಾಟಿಕ್ ಪಕ್ಷವನ್ನು ಬೆಂಬಲಿಸುವವರಾಗಿದ್ದಾರೆ. ಆದರೆ ಈ ಪರಿಸ್ಥಿತಿಯಲ್ಲಿ ಟ್ರಂಪ್ ತರಂಗ ಸೃಷ್ಟಿಸುವ ಉದ್ದೇಶದಿಂದ ಅಬ್‌ಕಿಬಾರ್ ಟ್ರಂಪ್ ಸರಕಾರ್ ಘೋಷಣೆಗೆ ಟ್ರಂಪ್ ಮೊರೆಹೋಗಿದ್ದಾರೆ ಎನ್ನಲಾಗಿದೆ. 20 ಚ್ಯಾನೆಲ್‌ಗಳಲ್ಲಿ ಈ ಜಾಹೀರಾತನ್ನು ಪ್ರದರ್ಶಿಸಲಾಗಿದೆ ಎಂದುಟ್ರಂಪ್‌ರ ಭಾರತೀಯ ಅಮೆರಿಕನ್ ಸಲಹಾಸಮಿತಿ ಅಧ್ಯಕ್ಷ ಸಲಭ್ ಕುಮಾರ್ ಹೇಳಿದ್ದಾರೆ.
ಟ್ರಂಪ್‌ರ ಸೊಸೆ ಲಾರಾ ಟ್ರಂಪ್ ಕಳೆದ ದಿವಸ ಇಂಡಿಯನ್ ಸಮುದಾಯದೊಂದಿಗೆ ದೇವಸ್ಥಾನದಲ್ಲಿ ದೀಪಾವಳಿ ಆಚರಿಸಿದ್ದು ದೊಡ್ಡ ಸುದ್ದಿಯಾಗಿತ್ತು ಎಂದು ವರದಿ ತಿಳಿಸಿದೆ.







