ಟಾಟಾ ಅಧ್ಯಕ್ಷತೆಗೆ ಆಂತರಿಕ ಅಭ್ಯರ್ಥಿಗಳ ಹೆಸರು ಪರಿಶೀಲನೆ

ಮುಂಬೈ,ಅ.28: ಭಾರೀ ಸುದ್ದಿಗೆ ಕಾರಣವಾಗಿದ್ದ ಸೈರಸ್ ಮಿಸ್ತ್ರಿಯವರ ಹಠಾತ್ ಎತ್ತಂಗಡಿಯಿಂದ ತೆರವಾಗಿರುವ ಟಾಟಾ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ಕಂಪನಿಯವರೇ ಆಗಿರುವ ಕನಿಷ್ಠ ಇಬ್ಬರು ಅಭ್ಯರ್ಥಿಗಳ ಹೆಸರುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಈ ವಿಷಯವನ್ನು ಬಲ್ಲ ಮೂಲಗಳು ತಿಳಿಸಿವೆ.
ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಚಂದ್ರಶೇಖರನ್ ಮತ್ತು ಜಾಗ್ವಾರ್ ಲ್ಯಾಂಡ್‌ರೋವರ್‌ನ ಮುಖ್ಯಸ್ಥ ರಾಲ್ಫ್ ಸ್ಪೆಥ್ ಅವರು ಅಧ್ಯಕ್ಷ ಹುದ್ದೆಗೆ ಪರಿಶೀಲಿಸಲ್ಪಡುತ್ತಿರುವವರಲ್ಲಿ ಸೇರಿದ್ದಾರೆ ಎಂದು ಅವು ಹೇಳಿವೆ.
ಟಾಟಾ ಸಮೂಹದ ಸ್ಥಾಪಕ ಕುಟುಂಬದ ಸದಸ್ಯ ಹಾಗೂ ಮಿಸ್ತ್ರಿಯವರ ಭಾವ ನಾಗಿರುವ ಟ್ರೆಂಟ್ ಲಿಮಿಟೆಡ್‌ನ ಅಧ್ಯಕ್ಷ ನೋಯೆಲ್ ಟಾಟಾ ಹೆಸರನ್ನೂ ಪರಿಶೀಲಿಸಲಾಗುತ್ತಿದೆ. ಆದರೆ ನೂತನ ಅಧ್ಯಕ್ಷರನ್ನು ಆಯ್ಕೆಮಾಡಲು ಆಯ್ಕೆ ಸಮಿತಿಯು ನಾಲ್ಕು ತಿಂಗಳ ಕಾಲಾವಕಾಶ ಹೊಂದಿರುವುದರಿಂದ ಈ ಕಿರುಪಟ್ಟಿಯಲ್ಲಿ ಬದಲಾವಣೆ ಗಳಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು.
Next Story





