ಬೇಹುಗಾರಿಕೆ ಜಾಲ: ಜೋಧಪುರದ ವೀಸಾ ಏಜೆಂಟ್ ಬಂಧನ

ಹೊಸದಿಲ್ಲಿ, ಅ.28: ಗೂಢಚರ್ಯೆ ಜಾಲದ ಆರೋಪಿ ಶುಐಬ್ ಎಂಬಾತನನ್ನು ಜೋಧಪುರದಿಂದ ಕರೆತಂದ ಬಳಿಕ ಇಂದಿಲ್ಲಿ ಬಂಧಿಸಲಾಗಿದೆ. ಆತ ಕಳೆದ 3-4 ವರ್ಷಗಳಿಂದ ಪಾಕಿಸ್ತಾನಿ ದೂತಾವಾಸದ ಉಚ್ಚಾಟಿತ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದನು ಹಾಗೂ ಪಾಕಿಸ್ತಾನಕ್ಕೆ 6 ಬಾರಿ ಭೇಟಿ ನೀಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಶುಐಬ್‌ನಲ್ಲಿದ್ದ ‘ಫ್ಯಾಬ್ಲೆಟ್’ ಒಂದರಿಂದ ಮಾಹಿತಿ ಸಂಗ್ರಹಿಸಲು ತಾವು ಪ್ರಯತ್ನಿಸಲಿದ್ದೇವೆ. ನಿನ್ನೆ ಸಂಜೆ ಜೋಧಪುರದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಳ್ಳುವ ವೇಳೆ ಆತ ಅದನ್ನು ಹಾನಿಗೊಳಿಸಲು ಪ್ರಯತ್ನಿಸಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಸುಭಾಶ್ ಜಾಂಗಿರ್ ಹಾಗೂ ವೌಲಾನಾ ರಂಝಾನ್ ಎಂಬವರೊಂದಿಗೆ ಶುಐಬ್‌ನ ವಿಚಾರಣೆ ನಡೆಸಲಾಗುವುದೆಂದು ತನಿಖೆದಾರರು ಹೇಳಿದ್ದಾರೆ.
ಪಾಸ್‌ಪೋರ್ಟ್ ಹಾಗೂ ವೀಸಾ ಏಜೆಂಟ್ ಆಗಿದ್ದ ಶುಐಬ್, ಸುಭಾಶ್ ಹಾಗೂ ವೌಲಾನಾರನ್ನು ಬೇಹು ಜಾಲಕ್ಕೆ ನೇಮಿಸಿದವನೆಂದು ಆರೋಪಿಸಲಾಗಿದೆ. ಆತನ ತಾಯಿಯ ಹೆತ್ತವರು ಪಾಕಿಸ್ತಾನದಲ್ಲಿದ್ದಾರೆ. ಅಲ್ಲಿಗೆ ಶುಐಬ್ ಕನಿಷ್ಠ 6 ಬಾರಿ ಭೇಟಿ ನೀಡಿದ್ದಾನೆಂದು ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದ ತಿಳಿಸಿದ್ದಾರೆ.





