ರಾಜ್ಯಾದ್ಯಂತ ಗಿಡ ಮೂಲಿಕೆಗಳ ವನ ನಿರ್ಮಾಣಕ್ಕೆ ಕ್ರಮ: ಸಚಿವ ರೈ

ಮಂಗಳೂರು, ಅ.28: ಗಿಡ ಮೂಲಿಕೆಗಳ ವನಗಳನ್ನು ನಿರ್ಮಿಸಲು ಸರಕಾರ ರಾಜ್ಯಾದ್ಯಂತ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುತ್ತಿದೆ ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ದ.ಕ ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆಗಳ ಮೂಲಕ ನಗರದ ಪುರಭವನದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಭಾರತೀಯ ವೈದ್ಯ ಪದ್ಧತಿಗಳ ಬಗ್ಗೆ ಜನರಲ್ಲಿ ನಂಬಿಕೆ ಮೂಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಪ್ರಾಚೀನ ಭಾರತದ ವೈದ್ಯ ಪದ್ಧತಿಗಳಲ್ಲಿ ಗಿಡ ಮೂಲಿಕೆಗಳನ್ನು ಹೆಚ್ಚು ಅವಲಂಬಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಗಿಡಮೂಲಿಕೆಗಳು ನಾಶವಾಗುತ್ತಿರುವುದನ್ನು ಉಳಿಸಬೇಕಾದ ಅಗತ್ಯವಿದೆ. ಅವುಗಳನ್ನು ಸಂರಕ್ಷಿಸುವ ಪ್ರದೇಶಕ್ಕೆ ಜಿಲ್ಲೆಯ ಪುತ್ತೂರಿನಲ್ಲಿ ನಿರ್ಮಾಣವಾಗಿರುವ ದೇಯಿ ಬೈದೇದಿವನ ಉದಾಹರಣೆಯಾಗಿದೆ. ಪ್ರಾಚೀನ ದೇಸೀಯ ಪದ್ಧತಿಗೆ ಮೂಲ ಆಧಾರವಾದ ಪ್ರಕೃತಿಕ ಚಿಕಿತ್ಸೆ, ಗಿಡಮೂಲಿಕೆಗಳ ಬಗ್ಗೆ ಗಮನಹರಿಸಬೇಕಾದರೆ ಅವುಗಳ ಬಗ್ಗೆ ಜನಜಾಗೃತಿ ಅಗತ್ಯ. ಈ ನಿಟ್ಟಿನಲ್ಲಿ ಪ್ರಸಕ್ತ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಸಹಾಯವಾಗುವಂತಾಗಲಿ ಎಂದು ಶುಭ ಹಾರೈಸಿದರು.
ಯೋಗ, ವ್ಯಾಯಾಮ ಮಾಡಿ ಮಾತ್ರೆಗಳಿಂದ ದೂರ ಮಧುಮೇಹ ಕಾಯಿಲೆಯ ಲಕ್ಷಣಗಳು ಕಂಡು ಬಂದಾಗ ನಾನು ಯೋಗ ಮತ್ತು ನಿರಂತರ ವ್ಯಾಯಾಮದ ಮೂಲಕ ನನ್ನ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈಗ ಯಾವೂದೇ ಮಾತ್ರೆ ತೆಗೆದುಕೊಳ್ಳುತ್ತಿಲ್ಲ. ನನ್ನ ಜೀವನ ಕ್ರಮ, ಆಹಾರ ಪದ್ಧತಿಯಲ್ಲಿ ದೇಹದ ಆರೋಗ್ಯವನ್ನು ಕಾಯ್ದುಕೊಂಡಿದ್ದೇನೆ ಎಂದು ರಮಾನಾಥ ರೈ ತಮ್ಮ ಸ್ವ-ಅನುಭವವನ್ನು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಇಕ್ಬಾಲ್, ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ವರಿ ದೇವಿ, ಆಯುಷ್ ಫೌಂಡೇಶನ್‌ನ ಪದಾಧಿಕಾರಿಗಳಾದ ಡಾ.ಆಶಾಜ್ಯೊತಿ ರೈ, ಕೃಷ್ಣ ರಾಜ್ ಭಟ್, ಹಿರಿಯ ವೈದ್ಯಾಧಿಕಾರಿ ಡಾ.ದೇವದಾಸ್ ಹಾಗೂ ವಿವಿಧ ಆರ್ಯುವೇದ ಕಾಲೇಜಿನ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.







