ಜೆರುಸಲೇಂ: ಯೇಸು ಕ್ರಿಸ್ತರ ಗೋರಿ ಪತ್ತೆ

ಗೋರಜೆರುಸಲೇಂ, ಅ. 28: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಬಳಿಕ ಅವರ ದೇಹವನ್ನು ಇಡಲಾಗಿದೆ ಎಂದು ನಂಬಲಾದ ಗೋರಿಯನ್ನು ಪ್ರಾಚೀನ ವಸ್ತುಗಳ ಸಂರಕ್ಷಕರು ಶತಮಾನಗಳಲ್ಲೇ ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.
ಜೆರುಸಲೇಂನ ಓಲ್ಡ್ ಸಿಟಿಯಲ್ಲಿರುವ 'ಹೋಲಿ ಸೆಪಲ್ಚರ್' ಚರ್ಚ್‌ನಲ್ಲಿರುವ ಕ್ರೈಸ್ತ ಧರ್ಮದ ಅತ್ಯಂತ ಪವಿತ್ರ ಸ್ಮಾರಕವನ್ನು ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಚರ್ಚ್‌ನಲ್ಲಿರುವ ಬಂಡೆಯಿಂದ ಕೆತ್ತಲಾದ ಗೋರಿಯ ಶಿಲಾಕಲ್ಲಿನ ಹಲಗೆಯನ್ನು ತೆಗೆಯಲಾಗಿದೆ ಎಂದು 'ನ್ಯಾಶನಲ್ ಜಿಯಾಗ್ರಫಿಕ್'ನಲ್ಲಿ ಪ್ರಕಟಗೊಂಡಿರುವ ವರದಿಯೊಂದು ತಿಳಿಸಿದೆ.
ಈಗ, ಯೇಸು ಕ್ರಿಸ್ತರ ಮೃತದೇಹವನ್ನು ಇಡಲಾಗಿದೆ ಎಂದು ನಂಬಲಾದ ಬಂಡೆಕಲ್ಲಿನ ಮೂಲ ಗೋರಿ ಅಥವಾ 'ದಫನ ಮಂಚ'ವನ್ನು ಪರಿಶೀಲಿಸಲು ನವೀಕರಣ ಕೆಲಸಗಾರರಿಗೆ ಸಾಧ್ಯವಾಗಲಿದೆ.
''ಗೋರಿಯ ಶಿಲಾಕಲ್ಲಿನ ಮುಚ್ಚಳವನ್ನು ತೆಗೆಯಲಾಗಿದೆ ಹಾಗೂ ಅದರಡಿಯಲ್ಲಿರುವ ವಸ್ತುಗಳ ರಾಶಿಯನ್ನು ನೋಡಿ ನಮಗೆ ಆಶ್ಚರ್ಯವಾಗಿದೆ'' ಎಂದು ಪ್ರಾಚೀನವಸ್ತುಶಾಸ್ತ್ರಜ್ಞ ಫ್ರೆಡ್ರಿಕ್ ಹೈಬರ್ಟ್ 'ನ್ಯಾಶನಲ್ ಜಿಯಾಗ್ರಫಿಕ್'ಗೆ ಹೇಳಿದ್ದಾರೆ.
'ನ್ಯಾಶನಲ್ ಜಿಯಾಗ್ರಫಿಕ್' ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿದೆ.
'ಎಡಿಕ್ಯೂಲ್' ಎಂದು ಕರೆಯಲ್ಪಡುವ ಆವರಣದ ಒಳಗೆ ಗೋರಿಯಿದೆ. ಅದನ್ನು ಗ್ರೀಸ್‌ನ ಪುರಾತನ ವಸ್ತುಗಳ ಸಂರ್ಕಕ್ಷಕರ ತಂಡವೊಂದು ನವೀಕರಿಸುತ್ತಿದೆ.






