ಉಡುಪಿ ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆ: ಪ್ರಮೋದ್

ಉಡುಪಿ, ಅ.28: ಅಜ್ಜರಕಾಡಿನಲ್ಲಿರುವ ಉಡುಪಿ ಸರಕಾರಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಧನ್ವಂತರಿ ಜಯಂತಿಯ ಪ್ರಯುಕ್ತ ಶುಕ್ರವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ 1998ರಲ್ಲೇ ಜಿಲ್ಲೆಯಾಗಿದ್ದರೂ ಸಹ ಇಲ್ಲಿನ ಆಸ್ಪತ್ರೆ ಮಾತ್ರ ಈವರೆಗೂ ತಾಲೂಕು ಆಸ್ಪತ್ರೆಯಾಗಿಯೇ ಉಳಿದಿತ್ತು. ಈ ಬಗ್ಗೆ ತಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಇದೀಗ ಮುಖ್ಯಮಂತ್ರಿಗಳು ಈ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಆದೇಶ ನೀಡಿದ್ದಾರೆ ಎಂದರು.
ಶೀಘ್ರದಲ್ಲೇ ಈ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೂ ವೈದ್ಯರು, ಹೆಚ್ಚಿನ ಸಂಖ್ಯೆಯ ಶುಶ್ರೂಷಕರು, ತಂತ್ರಜ್ಞರುಗಳು ನೇಮಕಾತಿಗೊಳ್ಳಲಿದ್ದಾರೆ. ತಾಂತ್ರಿಕ ಉಪಕರಣಗಳು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದವರು ತಿಳಿಸಿದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ವೈದ್ಯಕೀಯ ಪದ್ದತಿ ಆಯುರ್ವೇದ ಮಾತ್ರ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ಎಂದರೆ ಅದು ಆಯುರ್ವೇದ ಮಾತ್ರ. ರಾಮಾಯಣ, ಮಹಾಭಾರತದ ಕಾಲದಲ್ಲೂ ಅನೇಕ ರೋಗಗಳನ್ನು ಆಯುರ್ವೇದದ ಮೂಲಕವೇ ಗುಣಪಡಿಸಿರುವ ಬಗ್ಗೆ ಉಲ್ಲೇಖವಿದೆ. ಅಂದಿನ ಜನರ ಸರಾಸರಿ ಜೀವಿತಾವಧಿ 120 ವರ್ಷಗಳಾಗಿದ್ದರೆ ಇಂದು ಕಲುಷಿತ ವಾತಾವರಣ, ನೀರು, ಆಹಾರ ಪದ್ದತಿಯಿಂದ ಜೀವಿತಾವಧಿ 70 ವರ್ಷಗಳಿಗೆ ಇಳಿದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.9ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. 2020ರ ವೇಳೆಗೆ ಈ ಪ್ರಮಾಣ ಶೇ.13 ತಲುಪುವ ಸಾಧ್ಯತೆಯಿದ್ದು, ಮಧುಮೇಹದಿಂದ ದೇಹದ ಹಲವು ಬಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ, ಮಧುಮೇಹ ಬಾರದಂತೆ ಕ್ರಮ ವಹಿಸುವ ಹಾಗೂ ರೋಗ ವನ್ನು ನಿಯಂತ್ರಿಸುವ ವಿಷಯದಲ್ಲಿ ಮಧುಮೇಹಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣಾ ಕಾರ್ಯಕ್ರಮ ನಡೆಯಲಿದೆ. ನಮ್ಮ ಆಹಾರ ಪದ್ದತಿ ಹಾಗೂ ಜೀವನಶೈಲಿಯಿಂದ ಮಧುಮೇಹ ನಿಯಂತ್ರಣ ಸಾಧ್ಯವಿದೆ ಎಂದವರು ತಿಳಿಸಿದರು.
ಜಿಲ್ಲಾ ಸರ್ಜನ್ ಡಾ. ಮಧುಸೂಧನ ನಾಯಕ್, ಜಿಲ್ಲಾ ಆರ್ಯುವೇದ ಪೆಡರೇಷನ್ ಅಧ್ಯಕ್ಷ ಎನ್.ಟಿ.ಅಂಚನ್ ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ ರಾವ್ ಸ್ವಾಗತಿಸಿ, ವಂದಿಸಿದರು.







