ದಿಲ್ಲಿ ವಿಮಾನ ನಿಲ್ದಾಣದ ಸಮೀಪದ ನಿವಾಸಿಗಳ ತಲೆಯ ಮೇಲೆ ಏನು ಬೀಳುತ್ತಿದೆ ಗೊತ್ತೇ?
ಹೆದರಬೇಕೇ....ಸಿಟ್ಟು ಮಾಡಿಕೊಳ್ಳಬೇಕೇ...ಅಲ್ಲ....?
.jpg)
ಹೊಸದಿಲ್ಲಿ,ಅ.28: ‘ಭಗವಾನ್ ದೇತಾ ಹೈ ತೋ ಛಪ್ಪಡ್ ಫಾಡ್‌ಕೆ ದೇತಾ ಹೈ’ಎನ್ನುವುದು ಹಿಂದಿ ನಾಣ್ನುಡಿಯಾಗಿದ್ದರೂ ಎಲ್ಲ ಭಾಷಿಕರಿಗೂ ಸಾಮಾನ್ಯವಾಗಿ ಸುಪರಿಚಿತವೇ ಆಗಿದೆ. ದೇವರು ಕೊಡುವುದಿದ್ದರೆ ಸಮೃದ್ಧಿಯಾಗಿ ಕೊಡುತ್ತಾನೆ ಎನ್ನುವುದು ಇದರ ಸರಳ ಅರ್ಥ. ಇದೀಗ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿಯ ನಿವಾಸಿಗಳಿಗೂ ಇಂತಹುದೇ ಅನುಭವವಾಗುತ್ತಿದೆ. ಆದರೆ ಇಲ್ಲಿ ಕೊಡುತ್ತಿರುವುದು ಮಾತ್ರ ದೇವರು ಅಲ್ಲ......ವಿಮಾನಯಾನ ಸಂಸ್ಥೆಗಳು. ಅಂದ ಹಾಗೆ ಇಲ್ಲಿ ಮೇಲಿಂದ ಬೀಳುತ್ತಿರುವುದು ಸಂಪತ್ತಲ್ಲ...ರಾಶಿ ರಾಶಿ ಮಾನವ ಮಲ!
ಲೆಜ(ನಿವೃತ್ತ) ಸತ್ವಂತ್ ಸಿಂಗ್ ದಹಿಯಾ ಇದೀಗ ಈ ದೂರನ್ನು ಹಿಡಿದುಕೊಂಡು ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಮೊರೆ ಹೋಗಿದ್ದಾರೆ.ದಕ್ಷಿಣ ದಿಲ್ಲಿಯ ವಸಂತ್ ಎನ್‌ಕ್ಲೇವ್‌ನಲ್ಲಿನ ಅವರ ನಿವಾಸವನ್ನು ಮತ್ತು ಗೋಡೆಗಳ ಮೇಲೆ ಮಾನವ ಮಲವಿದೆಯೇ ಎನ್ನುವುದನ್ನು ಪರಿಶೀಲಿಸಲು ಹಿರಿಯ ಪರಿಸರ ಇಂಜಿನಿಯರ್ ಓರ್ವರನ್ನು ನಿಯೋಜಿಸುವಂತೆ ಕೇಂದ್ರ ಮಾಲಿನ್ಯ ನಿಯಂತರಣ ಮಂಡಳಿ(ಸಿಪಿಸಿಬಿ)ಗೆ ಎನ್‌ಜಿಟಿ ಅಧ್ಯಕ್ಷ ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಆದೇಶಿಸಿದೆ. ಗೋಡೆಗಳ ಮೇಲೆ ಮಾನವ ಮಲವು ಪತ್ತೆಯಾದರೆ ವಿಶ್ಲೇಷಣೆಗಾಗಿ ಸ್ಯಾಂಪಲ್‌ನ್ನು ಸಂಗ್ರಹಿಸುವಂತೆ ಮತ್ತು ವಿಶ್ಲೇಷಣಾ ವರದಿಯನ್ನು ತನಗೆ ಸಲ್ಲಿಸುವಂತೆ ಅದು ಸೂಚಿಸಿದೆ. ಪರಿಸರ ಮತ್ತು ಅರಣ್ಯ ಹಾಗೂ ನಾಗರಿಕ ವಾಯುಯಾನ ಸಚಿವಾಲಯಗಳು ಮತ್ತು ಸಿಪಿಸಿಬಿಗೆ ನೋಟಿಸುಗಳನ್ನೂ ಅದು ಹೊರಡಿಸಿದೆ.
ಇದು ಸ್ವಚ್ಛ ಭಾರತ ಅಭಿಯಾನದ ಉಲ್ಲಂಘನೆಯಾಗಿದೆ ಎಂದು ಬಣ್ಣಿಸಿರುವ ದಹಿಯಾ, ಸ್ಥಳೀಯ ನಿವಾಸಿಗಳ ಆರೋಗ್ಯಕ್ಕೆ ಅಪಾಯವನ್ನೊಡ್ಡುತ್ತಿರುವ ವಾಣಿಜ್ಯಿಕ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮಗಳನ್ನು ಜರುಗಿಸುವಂತೆ ಮತ್ತು ಭಾರೀ ದಂಡವನ್ನು ಹೇರುವಂತೆ ತನ್ನ ಅರ್ಜಿಯಲ್ಲಿ ಕೋರಿದ್ದಾರೆ.
ವಿಮಾನಗಳ ಶೌಚಾಲಯಗಳಲ್ಲಿ ಮಾನವ ವಿಸರ್ಜನೆಯನ್ನು ವಿಶೇಷ ಟ್ಯಾಂಕುಗಳಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ ವಿಮಾನವು ನಿಲ್ದಾಣದಲ್ಲಿ ಇಳಿದ ಬಳಿಕ ಸ್ವಚ್ಛತಾ ಸಿಬ್ಬಂದಿಗಳು ಅದನ್ನು ವಿಲೇವಾರಿ ಮಾಡುತ್ತಾರೆ. ಆದರೆ ಕೆಲವೊಮ್ಮೆ ಈ ಟ್ಯಾಂಕುಗಳು ಆಕಾಶದಲ್ಲಿಯೇ ಸೋರಿಕೆಯಾಗುತ್ತವೆ ಎನ್ನುವುದನ್ನು ವಾಯುಯಾನ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇದರಿಂದ ಭಾರತ ಸೇರಿದಂತೆ ಹಲವೆಡೆ ಜನರು ಗಾಯಗೊಂಡಿ ರುವ ನಿದರ್ಶನಗಳೂ ಇವೆ!
ಕಳೆದೊಂದು ವಾರದಿಂದಲೂ ಬೆಳಗಿನ ಜಾವದಲ್ಲಿ ವಿಮಾನಗಳಲ್ಲಿನ ಮಲ ನಮ್ಮ ಮನೆಯ ತಾರಸಿಯಲ್ಲಿ ರಾಶಿ ರಾಶಿಯಾಗಿ ಬೀಳುತ್ತಿದೆ. ಗೋಡೆಗಳಿಗೆಲ್ಲ ಮಲ ಮೆತ್ತಿಕೊಳ್ಳುತ್ತಿದೆ. ಹಿಂದೆಯೂ ಹೀಗೆಯೇ ಆಗಿತ್ತು. ಆಗ 50,000 ರೂ.ಖರ್ಚು ಮಾಡಿ ಮನೆಗೆ ಹೊಸದಾಗಿ ಸುಣ್ಣಬಣ್ಣ ಮಾಡಿಸಿದ್ದೆ. ಈಗ ದೀಪಾವಳಿ ಎದುರಿನಲ್ಲಿರುವಾಗ ಮತ್ತೆ ಅದೇ ಕಥೆಯಾಗಿದೆ. ನಾನು ನಿವೃತ್ತ ವ್ಯಕ್ತಿ,ವಿಮಾನಯಾನ ಸಂಸ್ಥೆಗಳ ಈ ಹೊಲಸನ್ನು ಸ್ವಚ್ಛಗೊಳಿಸಲು ನಾನು ಪದೇಪದೇ ಎಲ್ಲಿಂದ ದುಡ್ಡು ತರಲಿ ಎಂದು ದಹಿಯಾ ಅಲವತ್ತುಕೊಂಡಿದ್ದಾರೆ.







