ಯಮನ್ ಬಂಡುಕೋರರ ಕ್ಷಿಪಣಿ ಮಕ್ಕಾ ಸಮೀಪ ಪತನ

ದುಬೈ, ಅ. 28: ಯಮನ್ ಬಂಡುಕೋರರು ದೀರ್ಘ ವ್ಯಾಪ್ತಿಯ ಕ್ಷಿಪಣಿಯೊಂದನ್ನು ಸೌದಿ ಅರೇಬಿಯದತ್ತ ಉಡಾಯಿಸಿದ್ದು, ಅದನ್ನು ಪವಿತ್ರ ನಗರ ಮಕ್ಕಾದ ಸಮೀಪ ಹೊಡೆದುರುಳಿಸಲಾಗಿದೆ ಎಂದು ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ಶುಕ್ರವಾರ ಹೇಳಿದೆ.
ಸೌದಿ ನೇತೃತ್ವದ ಮಿತ್ರಪಡೆಯು ಕಳೆದ ವರ್ಷದ ಮಾರ್ಚ್‌ನಿಂದ ಯಮನ್ ಬಂಡುಕೋರರ ವಿರುದ್ಧ ವಾಯು ದಾಳಿ ನಡೆಸುತ್ತಿದೆ.
ಬಂಡುಕೋರರ ಕ್ಷಿಪಣಿಯನ್ನು ತಡೆಯಲು ಸೌದಿ ಅರೇಬಿಯ ‘ಪ್ಯಾಟ್ರಿಯಟ್’ ಕ್ಷಿಪಣಿಯನ್ನು ನಿಯೋಜಿಸಿದೆ.
ಅಲ್ ಹೌದಿ ಬಂಡುಕೋರರು ಗಡಿ ಸಮೀಪವಿರುವ ಸಾದ ಪ್ರಾಂತದ ತಮ್ಮ ಭದ್ರನೆಲೆಯಿಂದ ಗುರುವಾರ ಸಂಜೆ ಮಕ್ಕಾ ಪ್ರದೇಶದತ್ತ ಗುರಿಯಿರಿಸಿ ಕ್ಷಿಪಣಿ ಹಾರಿಸಿದರು ಎಂದು ಮಿತ್ರಪಡೆಯ ಹೇಳಿಕೆಯೊಂದು ತಿಳಿಸಿದೆ.
‘‘ನಮ್ಮ ವಾಯು ರಕ್ಷಣೆ ಘಟಕವು ಅದನ್ನು ತಡೆಯಲು ಸಮರ್ಥವಾಯಿತು ಹಾಗೂ ಮಕ್ಕಾದಿಂದ ಸುಮಾರು 65 ಕಿ.ಮೀ. ದೂರದಲ್ಲಿ ಅದನ್ನು ನಾಶಪಡಿಸಿತು’’ ಎಂದಿತು.
ಅಲ್ ಹೌದಿಗಳು ಮತ್ತು ಅವರ ಮಿತ್ರರಲ್ಲಿ ಸೋವಿಯತ್ ಕಾಲದ ಸ್ಕಡ್ ಕ್ಷಿಪಣಿಗಳು ಹಾಗೂ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಕ್ಷಿಪಣಿಗಳ ಸಂಗ್ರಹವಿದೆ.





