ತಳ್ಳುಗಾಡಿಗಳ ವಿರುದ್ಧ ನಗರಸಭೆ- ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ
ಉಡುಪಿ ನಗರಸಭೆ ಸಾಮಾನ್ಯಸಭೆಯಲ್ಲಿ ನಿರ್ಣಯ

ಉಡುಪಿ, ಅ.28: ಉಡುಪಿ ನಗರದ ಪ್ರಮುಖ ಸ್ಥಳಗಳಲ್ಲಿ ಪಾದಾಚಾರಿ ಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ತಳ್ಳುಗಾಡಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುವ ಕುರಿತು ಇಂದು ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ಡಿ.ಮಂಜುನಾಥಯ್ಯ ವಿಷಯ ಪ್ರಸ್ತಾಪಿಸಿ, ತಳ್ಳು ಗಾಡಿಗಳಿಗೆ ಯಾವುದೇ ನಿರ್ದಿಷ್ಟ ಸ್ಥಳಗಳಲ್ಲಿ ನಿಂತು ವ್ಯಾಪಾರ ಮಾಡಲು ಪರವಾನಿಗೆ ಇಲ್ಲದಿದ್ದರೂ ಜನನಿಬಿಡ ಸ್ಥಳಗಳಾದ ಸರ್ವಿಸ್, ಸಿಟಿ ಬಸ್ ನಿಲ್ದಾಣ, ಗುರುಕೃಪಾ ಸ್ಟುಡಿಯೋ, ಕಾರ್ಪೊರೇಶನ್ ಬ್ಯಾಂಕ್ ಮಾರ್ಗಗಳಲ್ಲಿ ನಿಂತು ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಗಳಿಗೆ ತೊಂದರೆಯಾಗುತ್ತಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರ ಸಹಕಾರ ಕೂಡ ಅಗತ್ಯ ಎಂದರು.
ತಳ್ಳುಗಾಡಿಗಳು ಎಲ್ಲಿಯೂ ನಿಂತು ವ್ಯಾಪಾರ ಮಾಡಲು ಅವಕಾಶ ಇಲ್ಲ. ಆದರೆ 70ಕ್ಕೂ ಅಧಿಕ ತಳ್ಳುಗಾಡಿಗಳು ವ್ಯಾಪಾರ ನಡೆಸುತ್ತಿವೆ. ಹೀಗಾಗಿ ಅಧಿಕಾರಿಗಳು ಹಾಗೂ ಪೊಲೀಸರು ಒಟ್ಟಿಗೆ ಸೇರಿ ಇದರ ವಿರುದ್ಧ ಕ್ರಮ ಜರಗಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು. ಇದಕ್ಕೆ ಯಶ್ಪಾಲ್ ಸುವರ್ಣ, ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ದಿನಕರ ಶೆಟ್ಟಿ ಹೆರ್ಗ ಧ್ವನಿಗೂಡಿಸಿ ಕೂಡಲೇ ಕ್ರಮ ಜರಗಿಸುವಂತೆ ಆಗ್ರಹಿಸಿದರು.
ಸಭೆಗೆ ಆಗಮಿಸಿದ್ದ ಉಡುಪಿ ನಗರ ಠಾಣಾಧಿಕಾರಿ ಅನಂತಪದ್ಮನಾಭ ಮಾತನಾಡಿ, ಈ ಕುರಿತು ಪೊಲೀಸ್ ಇಲಾಖೆಯು ರಕ್ಷಣಾತ್ಮಕಕ್ರಮಕ್ಕೆ ಬದ್ಧವಾಗಿದ್ದು, ತಳ್ಳುಗಾಡಿ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಕುರಿತ ನಿರ್ಣಯವನ್ನು ನೀಡಿದರೆ ಅದರಂತೆ ಕ್ರಮ ಜರಗಿಸಲಾಗುವುದು. ಮುಖ್ಯ ರಸ್ತೆಯಲ್ಲಿ ವ್ಯಾಪಾರ ನಡೆಸುವ ತಳ್ಳುಗಾಡಿಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ನಗರದ ವಿಶ್ವೇಶರಯ್ಯ ಕಟ್ಟಡವನ್ನು ಖಾಸಗಿಯವರ ಮೂಲಕ ಅಭಿವೃದ್ಧಿ ಪಡಿಸುವ ಕುರಿತು ಕಾನೂನು ಬದ್ಧವಾಗಿ ಮಾಡಿರುವ ದಾಖಲೆಯನ್ನು ನೀಡುವಂತೆ ನಗರಸಭೆಗೆ ಲಿಖಿತ ಮನವಿ ನೀಡಿದರೂ ಇನ್ನೂ ದಾಖಲೆಯನ್ನು ನೀಡಿಲ್ಲ ಎಂದು ಯಶ್ಪಾಲ್ ಸುವರ್ಣ ಸಭೆಯಲ್ಲಿ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು ‘ನಿಮಗೆ ಟೆಂಡರ್ ದಾಖಲೆಗಳು ನೀಡಬೇಕಾಗಿರುವುದರಿಂದ ಬೆಂಗಳೂರಿಗೆ ಮಾಹಿತಿ ನೀಡಲಾಗಿದೆ. ಅದು ಬಂದ ಕೂಡಲೇ ಎಲ್ಲ ದಾಖಲೆಗಳನ್ನು ನೀಡಲಾಗುವುದು’ ಎಂದರು.
ನಾವು ಈ ಕೆಲಸವನ್ನು ಕಾನೂನು ಬದ್ಧವಾಗಿಯೇ ಮಾಡಿದ್ದೇವೆ ಎಂದು ಅಧ್ಯಕ್ಷರು ಸ್ಪಷ್ಟನೆ ನೀಡಿದರು. ಈ ಯೋಜನೆಯಲ್ಲಿ ನಗರಸಭೆ ಕಾನೂನು ಪಾಲನೆ ಮಾಡುತ್ತಿಲ್ಲ. ಟೆಂಡರ್ ಕರೆಯದೆ ಪ್ರಸ್ತಾವನೆ ಸಲ್ಲಿಸಿದ ಒಬ್ಬರಿಗೆ ಈ ಕಟ್ಟಡವನ್ನು ವಹಿಸಿ ಕೊಡಲಾಗಿದೆ ಎಂದು ಮಹೇಶ್ ಠಾಕೂರು ದೂರಿದರು. ಇದಕ್ಕೆ ಆಕ್ಷೇಪಿಸಿದ ರಮೇಶ್ ಕಾಂಚನ್ ವಿರೋಧ ಪಕ್ಷದವರು ಅಭಿವೃದ್ಧಿಯ ವಿರೋಧಿಗಳು ಎಂದು ಆರೋಪಿಸಿದರು.
ಈ ಕುರಿತು ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರುಗಳ ಮಧ್ಯೆ ವಾಗ್ವಾದ ನಡೆದು ಸಭೆಯಲ್ಲಿ ಗದ್ದಲ ಉಂಟಾಯಿತು. ವಿಶ್ವೇಶರಯ್ಯ ಕಟ್ಟಡಕ್ಕೆ ಸಂಬಂಧಿಸಿದಂತೆ ನಗರಸಭೆಯವರು ಹೈಕೋರ್ಟ್ ನಲ್ಲಿ ಕೆವಿಯೆಟ್ ಅರ್ಜಿ ಹಾಕಿರುವುದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಅಭಿವೃದ್ಧಿ ಕಾರ್ಯಕ್ಕೆ ಯಾರದಾರೂ ಅಡ್ಡಗಾಲು ಹಾಕಬಹುದು ಎಂಬ ಕಾರಣಕ್ಕೆ ಮೊದಲೇ ಕೆವಿಯೆಟ್‌ನ್ನು ಹಾಕಲಾಗಿದೆ. ಪಾರದರ್ಶಕವಾಗಿ ಟೆಂಡರ್ ಕರೆದೆ ಈ ಯೋಜನೆಯನ್ನು ಖಾಸಗಿ ಯವರಿಗೆ ವಹಿಸಿಕೊಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.
ಸದಸ್ಯ ಪ್ರಶಾಂತ್ ಅಮೀನ್ ಮಾತನಾಡಿ, ಮಲ್ಪೆ ಸ್ಮಶಾನ ಅಭಿವೃದ್ದಿಗೆ 15ಲಕ್ಷ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಡೆಸಿದರೂ ಸ್ಥಳೀಯ ಸದಸ್ಯರ ಗಮನಕ್ಕೆ ತಂದಿಲ್ಲ. ಅಲ್ಲದೆ 15ಲಕ್ಷ ರೂ. ವೆಚ್ಚದಲ್ಲಿ ಸರಿಯಾದ ಕಾಮಗಾರಿ ನಡೆದಿಲ್ಲ. ಆ ಕುರಿತು ಸಮಗ್ರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿ ಈ ಕಾಮಗಾರಿಯ ಸಮಗ್ರ ವಿವರ ವನ್ನು ನೀಡಲಾಗುವುದು ಎಂದು ಅಧಿಕಾರಿ ಗಣೇಶ್ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು.
ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ
ಉಡುಪಿ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಖಾಸಗಿಯ ವರಿಗೆ ವಹಿಸಿಕೊಡದೆ ಸರಕಾರವೇ ಅಭಿವೃದ್ಧಿ ಪಡಿಸಬೇಕು ಎಂದು ವಿರೋಧ ಪಕ್ಷದ ಸದಸ್ಯ ಯಶ್ಪಾಲ್ ಸುವರ್ಣ ಸಭೆಯಲ್ಲಿ ಒತ್ತಾಯಿಸಿದರು.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪುರಭವನವನ್ನು ಖಾಸಗೀಕರಣ ಮಾಡಲಾಗಿದೆ. ಆ ಬಗ್ಗೆ ವಿಪಕ್ಷದವರು ವೌನವಾಗಿದ್ದಾರೆ ಎಂದು ರಮೇಶ್ ಕಾಂಚನ್ ಟೀಕಿಸಿದರು. ಈ ಬಗ್ಗೆ ಸದಸ್ಯರುಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ಆಸ್ಪತ್ರೆಯನ್ನು ಖಾಸಗೀಕರಣ ಮಾಡ ಬಾರದು. ಈ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಬೇಕು ಎಂದು ಮಹೇಶ್ ಠಾಕೂರು ತಿಳಿಸಿದರು. ಇದಕ್ಕೆ ಅಧ್ಯಕ್ಷರು ಸಮ್ಮತಿ ವ್ಯಕ್ತಪಡಿಸಿ, ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಪ್ರಶ್ನೆ ಕೇಳಲು ಬರೆದು ಪ್ರದರ್ಶಿಸಿದರು!
ಪ್ರಶ್ನೋತ್ತರ ಅವಧಿಯ ಬಹುಪಾಲು ಸಮಯ ತಳ್ಳುಗಾಡಿ ಹಾಗೂ ವಿಶ್ವೇಶರಯ್ಯ ಕಟ್ಟಡದ ಬಗ್ಗೆಯೇ ಚರ್ಚೆಗಳು ನಡೆಯುತ್ತಿದ್ದವು. ಈ ಮಧ್ಯೆ ಸದಸ್ಯ ಪ್ರಶಾಂತ್ ಅಮೀನ್ ತನ್ನ ವಾರ್ಡಿನ ಸಮಸ್ಯೆಯ ಕುರಿತು ಪ್ರಶ್ನೆ ಕೇಳಲು ಸಾಧ್ಯವಾಗದೆ ಸೋತು ಹೋದರು. ಇದರಿಂದ ಸಿಟ್ಟಿಗೆದ್ದ ಅವರು ತನ್ನ ಅಜೆಂಡಾದಲ್ಲಿ ‘ಪ್ರಶ್ನೆಗೆ ಅವಕಾಶ ಕೊಡಿ’ ಎಂದು ಬರೆದು ಸಭೆಗೆ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ನಂತರ ಅಧ್ಯಕ್ಷರು ಅವರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದರು.







