ರಾಘವೇಶ್ವರ ಶ್ರೀಗಳ ಆಹ್ವಾನಕ್ಕೆ ಖಂಡನೆ
ವಿದ್ಯಾಭಿವೃದ್ಧಿ ಸಂಘದ ಸುವರ್ಣಮಹೋತ್ಸವ
.jpg)
ಸಾಗರ, ಅ.28: ತಾಲೂಕಿನ 50 ವರ್ಷಗಳ ಇತಿಹಾಸವಿರುವ ಕೇಡಲಸರದ ವಿದ್ಯಾಭಿವೃದ್ಧಿ ಸಂಘವು ಪ್ರೌಢ ಶಿಕ್ಷಣದಿಂದ ಹಿಡಿದು ಕಾಲೇಜು ಶಿಕ್ಷಣದವರೆಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಸಂಸ್ಥೆಯ ಸುವರ್ಣ ಮಹೋತ್ಸವ ನ.4 ಮತ್ತು 5ರಂದು ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಹೊಸನಗರ ರಾಮಚಂದ್ರಾಪುರ ಮಠದ ಸ್ವಾಮಿಗಳನ್ನು ಕರೆದಿರುವುದು ಖಂಡನೀಯ ಎಂದು ಅಶ್ವಿನಿ ಕುಮಾರ್ ಹೇಳಿದರು. ತಾಲೂಕಿನ ಹೆಗ್ಗೋಡು ಕೇಡಲಸರದಲ್ಲಿ ವಿದ್ಯಾಭಿವೃದ್ಧಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ರಾಘವೇಶ್ವರ ಸ್ವಾಮಿಗಳು ಪಾಲ್ಗೊಳ್ಳದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿ ಶಾಲೆಯ ಹಳೆ ವಿದ್ಯಾರ್ಥಿಗಳು, ದಾನಿಗಳು, ಸಾಮಾಜಿಕ ಕಳಕಳಿಯ ನಾಗರಿಕರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ತಾಲೂಕಿನಲ್ಲಿ ರಾಘವೇಶ್ವರ ಸ್ವಾಮಿಗಳು ಗೂಂಡಾ ಪ್ರವೃತ್ತಿಯನ್ನು ಹುಟ್ಟುಹಾಕುತ್ತಿದ್ದು, ಸಭೆ ಸಮಾರಂಭಗಳಲ್ಲಿ ತಮ್ಮ ಪ್ರಚೋದನಾಕಾರಿ ಭಾಷಣದ ಮೂಲಕ ಭಕ್ತರನ್ನು ಎತ್ತಿಕಟ್ಟಿ, ಸತ್ಯವನ್ನು ಪ್ರತಿಪಾದಿಸುವವರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿರುವ ಶಾಲಾ ಶೈಕ್ಷಣಿಕ ಚಟುವಟಿಕೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆರೋಪ ಎದುರಿಸುತ್ತಿರುವ ಸ್ವಾಮಿಯೊಬ್ಬರನ್ನು ಕರೆಸಿ, ಅವರಿಂದ ಉಪದೇಶ ಬೋಧಿಸುವುದು ಸರಿಯಲ್ಲ. ಇದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರ ಕಾರ್ಯಕ್ರಮದಲ್ಲಿ ರಾಘವೇಶ್ವರ ಸ್ವಾಮಿಗಳು ಪಾಲ್ಗೊಳ್ಳದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿದರು. ಈ ಸಂದರ್ಭದಲ್ಲಿ ಆರ್ಯ ಈಡಿಗ ಯುವ ವೇದಿಕೆ ಅಧ್ಯಕ್ಷ ಸುಧಾಕರ ಕುಗ್ವೆ, ಪ್ರ. ಕಾರ್ಯದರ್ಶಿ ಕನ್ನಪ್ಪ ಮುಳಕೇರಿ, ಭೂ ರಹಿತ ಹೋರಾಟ ವೇದಿಕೆ ಸಂಚಾಲಕ ಅಶೋಕ ಮೂರ್ತಿ, ಮಂಜಪ್ಪ, ಕೃಷ್ಣಮೂರ್ತಿ, ಮಂಜುನಾಥೆ, ಗಣಪತಿ ಭಟ್ ಜಿಗಳೆಮನೆ, ಕೃಷ್ಣಮೂರ್ತಿ ಓತಗೋಡು ಮತ್ತಿತರರು ಹಾಜರಿದ್ದರು.







