ರೋಗಗಳಿಗೆ ಔಷಧೀಯ ಸಸ್ಯಗಳಲ್ಲಿ ಪರಿಹಾರವಿದೆ: ಡಾ. ಉದಯಕುಮಾರ್
ಧನ್ವಂತರಿ ಜಯಂತಿ

ಕುಶಾಲನಗರ, ಅ.28: ರೋಗ ಬಂದ ನಂತರ ಔಷಧಿಗಳ ಮೊರೆ ಹೋಗುವ ಬದಲು, ಕಾಯಿಲೆಗಳು ಹತ್ತಿರ ಸುಳಿಯದಂತೆ ಎಚ್ಚರವಹಿಸುವುದೇ ಉತ್ತಮ ಜೀವನಪದ್ಧತಿ ಎಂದು ಆಯುರ್ವೇದ ವೈದ್ಯ ಡಾ. ಉದಯಕುಮಾರ್ ಅಭಿಪ್ರಾಯಪಟ್ಟರು.
ಸ್ಥಳೀಯ ವಾಸವಿ ಯುವತಿಯರ ಮಂಡಳಿ ವತಿಯಿಂದ ಇಲ್ಲಿನ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ವಾಗಿ ಯೂ ಸದೃಢರಾಗಿರುವವರನ್ನು ಪರಿಪೂರ್ಣ ಮನುಷ್ಯ ಎಂದು ಆಯುರ್ವೇದ ಗುರುತಿಸುತ್ತದೆ. ಇಂತಹ ಆಯುರ್ವೇದದಲ್ಲಿನ ಔಷಧಗಳಿಗೆ ಅಧಿದೇವತೆಯೇ ಧನ್ವಂತರಿ. ದೀಪಾವಳಿಗೆ ಎರಡು ದಿನ ಮೊದಲು ಧನ್ವಂತರಿ ಜಯಂತಿ ಆಚರಿಸಲಾಗುತ್ತದೆ. ಚಿಕ್ಕ ಪುಟ್ಟ ಆರೋಗ
್ಯ ಸಮಸ್ಯೆಗಳಿಗೆಲ್ಲಾ ಆಸ್ಪತ್ರೆಗಳ ಬಾಗಿಲು ತಟ್ಟುವ ಬದಲು ನಮ್ಮ ಪರಿಸರದಲ್ಲಿ ಇರುವ ಔಷಧ ಸಸ್ಯಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದ ಅವರು, ತುಳಸಿ, ಗರಿಕೆ, ವೀಳ್ಯದೆಲೆ, ಪುದಿನ, ಪಪ್ಪಾಯಿ ಹಣ್ಣು ಮತ್ತು ಎಲೆ, ಸೀಬೆಕಾಯಿ ಮತ್ತು ಎಲೆ, ಮುಟ್ಟಿದರೆಮುನಿ, ದೊಡ್ಡಪತ್ರ, ಒಂದೆಲಗ, ಅಮೃತಬಳ್ಳಿ ಮತ್ತಿತರ ಸುಲಭವಾಗಿ ಸಿಗುವ ಔಷಧೀಯ ಗುಣ ಹೊಂದಿರುವ ಪ್ರಾಕೃತಿಕ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ವಿ.ಪಿ. ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ರಶ್ಮಿ ಅಮೃತರಾಜ್, ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಮುಖ್ಯೋಪಾಧ್ಯಾಯಿನಿ ಬಿ.ಎನ್. ಪುಷ್ಪಾ ಮತ್ತಿತರರು ವೇದಿಕೆಯಲ್ಲಿ ಇದ್ದರು.







