ವೆಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ನಿಲ್ಲಿಸಲು ಒತ್ತಾಯ

ಸಾಗರ, ಅ.28: ಕೇಂದ್ರ ಸರಕಾರ ಮುಸ್ಲಿಮರ ಶರೀಯತ್ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಶುಕ್ರವಾರ ಮಜಿಲೀಸ್ ಈ ಮುಂತೆಜಿಮ ಜಮೀಯತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಸರ್ವಲೋಕ ಸೃಷ್ಟಿಕರ್ತನಾದ ಭಗವಂತನು ಮಾನವನ ಭೌತಿಕ ಅಗತ್ಯಗಳನ್ನು ಪೂರೈಸಲು ಯೋಗ್ಯವಾದ ವಸ್ತುಗಳನ್ನು ಸೃಷ್ಟಿಸಿ ಆಧ್ಯಾತ್ಮಿಕ ಉನ್ನತಿಗಾಗಿ ಲೋಕದ ವಸ್ತುಗಳು ಸಮರ್ಪಕವಾಗಿ ಬಳಕೆ ಮಾಡಲು ಪ್ರವಾದಿಗಳ ಮೂಲಕ ಶರೀಯತ್ ಜಾರಿಗೆ ಕೊಟ್ಟಿದ್ದಾನೆ.
ಸತ್ಯ ವಿಶ್ವಾಸಿಗಳಾದ ಮುಸ್ಲಿಮರು ಶರೀಯತ್‌ನ್ನು ಬಿಟ್ಟು ಜೀವನ ಸಾಗಿಸಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೇಂದ್ರ ಸರಕಾರವು ತಲಾಖ್ ವಿಷಯವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಬುನಾದಿ ಹಾಕುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೇಂದ್ರ ಸರಕಾರ ಶರೀಯತ್ ಕಾನೂನು ಹಾಗೂ ಮುಸ್ಲಿಮರ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
ವಿವಾಹವು ಶರೀಯತ್ ಆಧಾರದ ಒಂದು ಒಪ್ಪಂದವಾಗಿದೆ. ಆದರೆ ಬದುಕಿನಲ್ಲಿ ತೀರಾ ಅನಿವಾರ್ಯವಾದಾಗ ಮತ್ತು ಬೇರೆ ದಾರಿ ಇಲ್ಲದೆ ಇದ್ದಾಗ ತಲಾಖ್ ಅವಕಾಶ ಬಳಸಿ ವಿವಾಹ ಸಂಬಂಧವನ್ನು ಮುರಿಯಬಹುದು ಎಂದು ಮನವಿಯಲ್ಲಿ ಹೇಳಲಾಗಿದೆ. ಆದರೆ ತ್ರಿವಳಿ ತಲಾಖ್ ಕುರಿತು ಜಗತ್ತಿನಾದ್ಯಂತ ನಡೆಯುತ್ತಿರುವ ಅಪಪ್ರಚಾರ, ನಿಂದನೆಗಳಿಗೆ ಕಾರಣ ಕೆಲವರು ಶರೀಯತ್ ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದಾಗಿದೆ. ಜೊತೆಗೆ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯಲು ಅಂತಾರಾಷ್ಟ್ರೀಯ ಸಂಚಿನ ಒಂದು ಭಾಗವೂ ಇದಾಗಿದೆ. ದೇವರು, ಧರ್ಮ, ಸಾಂಪ್ರದಾಯಿಕ ಆಚರಣೆ ಇತ್ಯಾದಿಗಳಿಗೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಂವಿಧಾನಿಕ ಸ್ವಾತಂತ್ರ್ಯ ಇದ್ದಾಗ್ಯೂ ಕೇಂದ್ರ ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಸಂದರ್ಭ ಸಂಘದ ಅಧ್ಯಕ್ಷ ಸೈಯದ್ ಮುನವ್ವರ್‌ಸಾಬ್, ಅಬ್ದುಲ್ ಮೊಹಿಸಿನ್‌ಖಾನ್, ಬಿ. ನೂರ್‌ಅಹ್ಮದ್, ಸೈಯದ್ ತಾಹೀರ್, ಸೈಯದ್ ಸುಹೈಲ್, ಮಕ್ಬೂಲ್ ಅಹ್ಮದ್, ಮುಹ್ಮಮದ್ ಝಕರಿಯ, ಫೈರೋಝ್ ಅಹ್ಮದ್ ನದ್ವಿ, ಅಹ್ಲೆ ಮುಸ್ತಫಾ ಮತ್ತಿತರರು ಹಾಜರಿದ್ದರು.







