ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮ ಮುಂದೂಡಲು ರಘುಪತಿ ಭಟ್ ಆಗ್ರಹ
ಉಡುಪಿ, ಅ.28: ಜನಪ್ರತಿನಿಧಿಗಳ ಸಭೆ ಕರೆಯದೆ, ಎಲ್ಲ ನಿಯಮ ಗಳನ್ನು ಉಲ್ಲಂಘಿಸಿ ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯನ್ನು ಖಾಸಗಿಯವರಿಗೆ ವಹಿಸಿಕೊಡಲಾಗುತ್ತಿದ್ದು, ಆದುದರಿಂದ ಅ.30 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆಸಲು ಉದ್ದೇಶಿಸಿರುವ ಶಿಲಾ ನ್ಯಾಸ ಕಾರ್ಯಕ್ರಮವನ್ನು ಮುಂದೂಡಬೇಕೆಂದು ಮಾಜಿ ಶಾಸಕ ಕೆ.ರಘು ಪತಿ ಭಟ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜಿಲ್ಲೆಗೆ ಸಂಬಂಧಿಸಿದ ಆಸ್ಪತ್ರೆಯಾಗಿರುವುದರಿಂದ ಈ ಕುರಿತು ಚರ್ಚಿಸಲು ಜಿಲ್ಲಾಮಟ್ಟದ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ ನಗರಸಭೆಯವರ ಸಭೆ ಕರೆಯಲಿಲ್ಲ. ಪಾರದರ್ಶಕ ಕಾಯಿದೆಯಡಿ ಗ್ಲೋಬಲ್ ಟೆಂಡರ್ ಕರೆಯದೆ ಏಕಾಏಕಿ ಬಿ.ಆರ್.ಶೆಟ್ಟಿ ಕಂಪೆನಿಗೆ ವಹಿಸಿ ಕೊಡಲಾಗಿದೆ ಎಂದು ದೂರಿದರು.
ಇದರ ಹಿಂದೆ ಸರಕಾರಿ ಭೂಮಿಯನ್ನು ಕಬಳಿಸುವ ಹುನ್ನಾರ ಅಡಗಿದೆ. ಇದು ವ್ಯವಹಾರ ದೃಷ್ಠಿಯಿಂದ ನಡೆಸಿರುವ ಲಾಭದಾಯಕ ಡೀಲ್ ಆಗಿದೆ ಎಲ್ಲವೂ ಕದ್ದುಮುಚ್ಚಿ ಏಕಾಏಕಿ ಮಾಡಿರುವುದರಿಂದ ಇದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವುದು ತಿಳಿಯುತ್ತದೆ ಎಂದು ಅವರು ಆರೋಪಿಸಿದರು. ಸರಕಾರ ಈ ಬೇಡಿಕೆಗೆ ಸ್ಪಂದಿಸದೆ ಶಿಲಾನ್ಯಾಸ ನಡೆಸಿದರೆ ಬಿಜೆಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ಉಪೇಂದ್ರ ನಾಯಕ್, ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.







