ಬೈಕಂಪಾಡಿ ಕೈಗಾರಿಕಾ ಪ್ರದೇಶವಿನ್ನು ಕೈಗಾರಿಕಾ ನಗರ ಪ್ರಾಧಿಕಾರ
ಮಂಗಳೂರು, ಅ.28: ಬೈಕಂಪಾಡಿ ಕೈಗಾರಿಕಾ ಪ್ರದೇಶವನ್ನು ಕೈಗಾರಿಕಾ ನಗರ ಪ್ರಾಧಿ ಕಾರವನ್ನಾಗಿ ಮಾಡುವ ಸಲುವಾಗಿ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ಕೋರಿ ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡಿಸಲ್ಪಟ್ಟಿತು. ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯರು ಮಾಹಿತಿ ಬಯಸಿದ ಹಿನ್ನೆಲೆಯಲ್ಲಿ ಈ ಕಾರ್ಯಸೂಚಿಯನ್ನು ನಗರ ಯೋಜನೆ ಸಮಿತಿಯಲ್ಲಿ ವಿಲೇವಾರಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶ ಸೇರಿ ರಾಜ್ಯದ 8 ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ನಗರ ಪ್ರಾಧಿಕಾರವನಾಗಿಸಲು ರಾಜ್ಯ ಸರಕಾರ ನಿರ್ದೇಶಿಸಿದೆ ಎಂದು ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಸಭೆಯಲ್ಲಿ ತಿಳಿಸಿದರು. ಮನಪಾ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶದ 1,407 ಎಕರೆ ಈ ಕೈಗಾರಿಕಾ ನಗರ ಪ್ರಾಧಿಕಾರಕ್ಕೆ ಒಳಪಡಲಿದೆ. ಸ್ಥಳೀಯ ಸಂಸ್ಥೆಗಳೇ ಅದರ ಅಭಿವೃದ್ಧಿಯನ್ನು ಮಾಡಬೇಕಾಗಿದ್ದು, ಸಂಗ್ರಹವಾಗುವ ತೆರಿಗೆಯಲ್ಲಿ ಶೇ. 30ರಷ್ಟನ್ನು ಮನಪಾಕ್ಕೆ ಸಲ್ಲಿಸಬೇಕಾಗಿದೆ ಎಂದು ಗೋಕುಲ್‌ದಾಸ್ ನಾಯಕ್ ಮಾಹಿತಿ ನೀಡಿದರು. ಈ ಬಗ್ಗೆ ಸದಸ್ಯರ ಒತ್ತಾಯದ ಮೇರೆಗೆ, ನಗರ ಯೋಜನಾ ಸಮಿತಿಯಲ್ಲಿ ವಿಲೇವಾರಿಗೆ ಕಳುಹಿಸಲು ನಿರ್ಣಯಿಸಲಾಯಿತು. ಎಂಆರ್‌ಪಿಎಲ್ ರಸ್ತೆ ದುರಸ್ತಿ: ಟೆಂಡರ್‌ಗೆ ಅನುಮೋದನೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ನ ಎಂಆರ್‌ಪಿಎಲ್ ರಸ್ತೆಯ ಕಟ್ಲ ಜಂಕ್ಷನ್‌ನಿಂದ ಕಾರ್ಗೋ ಗೇಟ್‌ವರೆಗೆ ಆಯ್ದ ಭಾಗಗಳಲ್ಲಿ ಡಾಮರೀಕರಣ ಕಾಮಗಾರಿಗೆ 99,87,000 ರೂ. ಅಂದಾಜು ವೆಚ್ಚದ ಆಡಳಿತ ಮಂಜೂರಾತಿ ಹಾಗೂ ಟೆಂಡರ್ ಕರೆಯಲು ಪೂರ್ವಭಾವಿ ಅನುಮೋದನೆಯನ್ನು ಸಭೆಯಲ್ಲಿ ನೀಡಲಾಯಿತು.





