ನಾಪತ್ತೆಯಾಗಿರುವ ನಜೀಬ್ ತಾಯಿಯ ಅಳಲು
ಹೊಸದಿಲ್ಲಿ, ಅ.28: ಹದಿಮೂರು ದಿನಗಳಿಂದ ನನ್ನ ಮಗು ಎಲ್ಲಿಯೂ ಕಾಣುತ್ತಿಲ್ಲವೆಂದು ಅಸಹಾಯಕರಾಗಿ ಕಣ್ಣೀರು ಸುರಿಸುತ್ತಾರೆ ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ ಫಾತಿಮಾ ನಫೀಝ್. ಎಬಿವಿಪಿ ಕಾರ್ಯಕರ್ತರಿಂದ ಎರಡು ವಾರಗಳ ಹಿಂದೆ ಹಲ್ಲೆಗೊಳಗಾದ ನಂತರ ನಝೀಬ್ ನಾಪತ್ತೆಯಾಗಿದ್ದರು. ಪ್ರತಿಯೊಂದು ಫೋನ್ ಕರೆ ಬರುವಾಗಲೂ ಅದು ತನ್ನ ಮಗನ ಕರೆ ಅಥವಾ ಆತನ ಬಗ್ಗೆ ಏನಾದರೂ ಮಾಹಿತಿ ನೀಡುವ ಕರೆಯಾಗಿರಬಹುದೆಂದು ಆ ತಾಯಿಗೆ ಅನಿಸುತ್ತಿದೆ.
ನಜೀಬ್ ತನ್ನ ಹೆತ್ತವರ ಹಿರಿಯ ಪುತ್ರ. ಆತನಿಗೆ ಇಬ್ಬರು ಸಹೊದರರು ಹಾಗೂ ಒಬ್ಬಳು ಸಹೋದರಿ ಇದ್ದಾಳೆ. ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದವರು ಮಾಡಿನಿಂದ ಬಿದ್ದ ನಂತರ ಹೃದಯಾಘಾತಕ್ಕೂ ಒಳಗಾಗಿ ಈಗ ಹಾಸಿಗೆ ಹಿಡಿದಿದ್ದಾರೆ. ತನ್ನ ಎಲ್ಲ ಮಕ್ಕಳೂ ವಿದ್ಯಾಭ್ಯಾಸ ಪಡೆಯುವಂತೆ ಫಾತಿಮಾ ನೋಡಿಕೊಂಡಿದ್ದಾರೆ. ಆಕೆಯ ಎರಡನೆ ಪುತ್ರ ಎಂಟೆಕ್ ಪೂರ್ತಿಗೊಳಿಸಿದ್ದು ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾನೆ. ನಜೀಬ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರೂ ಅದರಲ್ಲಿ ಯಶಸ್ಸು ಕಾಣದೆ ಕೊನೆಗೆ ಜೆಎನ್‌ಯುವಿನಲ್ಲಿ ಪ್ರವೇಶ ಪಡೆದಿದ್ದನು.
ತನ್ನ ಮಗ ಜೆಎನ್‌ಯು ಸೇರುವುದು ಮೊದಲು ತಮಗಿಷ್ಟವಿಲ್ಲದೇ ಇದ್ದರೂ, ಈ ಸಂಸ್ಥೆ ಭಾರತದ ಆಕ್ಸ್‌ಫರ್ಡ್ ಇದ್ದಂತೆ ಎಂದು ಹೇಳಿ ತನ್ನ ಮನವೊಲಿಸಿದ್ದ ಎಂದು ಹೇಳುವ ಆಕೆ, ತನ್ನ ಮಗ ಮುಗ್ಧ ಹಾಗೂ ಆತನಿಗೆ ಎಲ್ಲವೂ ನಾನಾಗಿದ್ದೆ ಎಂದು ನೆನಪಿಸಿಕೊಳ್ಳ್ಳುತ್ತಾರೆ.
ಕುಟುಂಬ ಮೂಲಗಳ ಪ್ರಕಾರ ನಝೀಬ್ ತನ್ನ ಕೋಣೆಯಲ್ಲಿ ಮಲಗಿದ್ದಾಗ ಮೂವರು ಎಬಿವಿಪಿ ಕಾರ್ಯಕರ್ತರು ಆತನ ಕೋಣೆಗೆ ಪ್ರಚಾರಾರ್ಥ ಹೊಕ್ಕಿದ್ದರೆನ್ನಲಾಗಿದೆ.ಅಲ್ಲಿ ಏನು ನಡೆಯಿತೆಂದು ತಿಳಿಯದೆ ಹೋದರೂ, ನಝೀಬ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಎಬಿವಿಪಿ ಕಾರ್ಯಕರ್ತನೊಬ್ಬ ದೂರಿದ್ದ. ಆದರೆ ಅದಕ್ಕೆ ಯಾವುದೇ ಸಾಕ್ಷಗಳಿರಲಿಲ್ಲ. ಆದರೆ ನಿಜಾಂಶವೇನು ಎಂದು ಗೊತ್ತಿರುವ ನಜೀಬ್ ನಾಪತ್ತೆಯಾಗಿದ್ದಾನೆ. ಆದರೆ ಮೂಲಗಳ ಪ್ರಕಾರ ಎಬಿವಿಪಿ ವಿದ್ಯಾರ್ಥಿಗಳು ಹಲವರು ಇತರರನ್ನು ಕರೆಸಿ ನಜೀಬನಿಗೆ ಥಳಿಸಿದ್ದಾರೆ. ಕೆಲವರ ಪ್ರಕಾರ ಕನಿಷ್ಠ 20 ಮಂದಿ ಅವರಲ್ಲಿ ಮೂವರು ಹೊರಗಿನವರು ಹಾಸ್ಟೆಲ್‌ಗೆ ಬಂದು ವಾರ್ಡನ್ ಸಮ್ಮುಖದಲ್ಲೇ ನಝೀಬನಿಗೆ ಹೊಡೆದಿದ್ದಾರೆನ್ನಲಾಗಿದೆ. ನಂತರ ನಜೀಬನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಜೀಬನ ವಿರುದ್ಧ ಎಬಿವಿಪಿ ದೂರು ದಾಖಲಿಸಿದ್ದರಿಂದ ಪೊಲೀಸ್ ದಾಖಲೆಗಳಲ್ಲಿ ಆತ ಆರೋಪಿಯಾಗಿದ್ದಾನೆ. ಜೆಎನ್‌ಯು ವಿದ್ಯಾರ್ಥಿಗಳು ನಝೀಬನ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ಉಪಕುಲಪತಿಗಳು ಒಂದು ಪಕ್ಷವನ್ನು ವಹಿಸಿ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆಂದು ಕೆಲವರು ದೂರುತ್ತಿದ್ದಾರೆ ಎನ್ನಲಾಗಿದೆ.







