ಸಶಸ್ತ್ರ ಪಡೆಗಳು ಸರಕಾರಕ್ಕೆ ಉತ್ತರದಾಯಿಯಾಗಿವೆ: ಸುಪ್ರೀಂ
ಹೊಸದಿಲ್ಲಿ,ಅ.28: ಸಶಸ್ತ್ರ ಪಡೆಗಳು ಸರಕಾರಕ್ಕೆ ಉತ್ತರದಾಯಿಯಾಗಿವೆ,ಇಲ್ಲದಿದ್ದರೆ ದೇಶದಲ್ಲಿ ಸೇನೆಯ ಆಡಳಿತವಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿತು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ನಡೆಸಿದ ಸರ್ಜಿಕಲ್ ದಾಳಿಗಳಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮತ್ತು ದಾಳಿಯ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿರುವುದಕ್ಕೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಕೋರಿ ನ್ಯಾಯವಾದಿ ಎಂ.ಎಲ್.ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್ ಮತ್ತು ಯು.ಯು.ಲಲಿತ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಸಂವಿಧಾನದಲ್ಲಿ ಹೇಳಿರುವಂತೆ ರಾಷ್ಟ್ರಪತಿಯವರು ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದಾರೆ. ಆದ್ದರಿಂದ ದಾಳಿಯ ಹೆಗ್ಗಳಿಕೆಯನ್ನು ಪಡೆದುಕೊಳ್ಳಲು ಪಾರಿಕ್ಕರ್ ಸೇರಿದಂತೆ ಕೇಂದ್ರ ಸಚಿವರಿಗೆ ಯಾವುದೇ ಹಕ್ಕಿಲ್ಲ ಎಂದು ಶರ್ಮಾ ವಾದಿಸಿದ್ದರು.
ಈ ಅರ್ಜಿಯು ವಿಚಾರಣೆಗೆ ಅರ್ಹವಲ್ಲ,ಇದರಲ್ಲಿ ಯಾವುದೇ ಸತ್ವ ಇಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪೀಠವು ತಿಳಿಸಿತು.





